ನ್ಯೂಯಾರ್ಕ್: ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್(T20 World Cup 2024) ಟೂರ್ನಿಯಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 5, ಬುಧವಾರ ಐರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೂ ಮುನ್ನವೇ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರು ವಿರಾಟ್ ಕೊಹ್ಲಿ(Virat Kohli), ರೋಹಿತ್ ಶರ್ಮ(Rohit Sharma), ಸೂರ್ಯಕುಮಾರ್ ಯಾದವ್(Suryakumar), ರಿಷಭ್ ಪಂತ್ ಸೇರಿ ಎಲ್ಲ ಆಟಗಾರರಿಗೂ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ಆಡಲಿದೆ. ಈ ಮೈದಾನ ಕ್ರಿಕೆಟ್ ಆಡಲು ಅಷ್ಟಾಗಿ ಸೂಕ್ತವಿಲ್ಲದ ಕಾರಣ ದ್ರಾವಿಡ್ ತಂಡದ ಆಟಗಾರರು ಬಹಳ ಎಚ್ಚರಿಕೆಯಿಂದ ಆಡಬೇಕಿದೆ ಎಂದು ಸೂಚನೆ ನೀಡಿದ್ದಾರೆ. ಈಗಾಗಲೇ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ನಮ್ಮ ಆಟಗಾರರ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದಾರೆ. ಪಿಚ್ ಹೇಗೆ ಬದಲಾಗುತ್ತದೆ ಎಂಬುದರ ಬಗ್ಗೆ ನಮಗೆ ಅರಿವು ಮೂಡಿದೆ. ಈ ಮೈದಾನದಲ್ಲಿ ಫೀಲ್ಡಿಂಗ್ ಮಾಡುವಾಗ ಆಟಗಾರರು ತುಂಬಾ ಜಾಗರೂಕರಾಗಿರಬೇಕು ಎಂದು ಆಟಗಾರರಿಗೆ ದ್ರಾವಿಡ್ ಎಚ್ಚರಿಕೆ ನೀಡಿದ್ದಾರೆ.
ಮೈದಾನದ ಬಗ್ಗೆ ಅಸಮಾಧಾನ ಹೊರಹಾಕಿದ ದ್ರಾವಿಡ್, ಕ್ರಿಕೆಟ್ ಆಡುಲು ಈ ಮೈದಾನ ಅಷ್ಟಾಗಿ ಯೋಗ್ಯವಾಗಿಲ್ಲ. ಇಬ್ಬನಿಯ ಸಮಸ್ಯೆಯಿಂದ ಮೈದಾನ ಜಾರುತ್ತಿದೆ. ಖಂಡಿತಾ ಆಟಗಾರರಿಗೆ ಮಾಂಸಖಂಡ, ಸ್ನಾಯುಸೆಳೆತದ ಸಮಸ್ಯೆ ಎದುರಾಗುವುದು ಖಚಿತ. ಹೀಗಾಗಿ ನಾವು ಆಟಗಾರರ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ ಎಂದಿದ್ದಾರೆ.
ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಈ ನಸ್ಸೌ ಕೌಂಟಿ ಕ್ರೀಡಾಂಗಣವನ್ನು ಕೇವಲ ಮೂರು ತಿಂಗಳಲ್ಲಿ ನಿರ್ಮಾಣ ಮಾಡಲಾಗಿತ್ತು. ಭಾರತ ಮತ್ತು ಪಾಕ್ ನಡುವಣ ಪಂದ್ಯಕ್ಕಾಗಿಯೇ ಈ ಸ್ಟೇಡಿಯಂ ನಿರ್ಮಾಣ ಮಾಡಿದ್ದಾಗಿ ಹೇಳಲಾಗಿದೆ. 34,000 ಆಸನ ಸಾಮರ್ಥ್ಯವುಳ್ಳ ಈ ಸ್ಟೇಡಿಯಂ ಅನ್ನು ಟಿ20 ವಿಶ್ವಕಪ್ ಮುಗಿದ ಬಳಿಕ ಕೆಡವಲಾಗುತ್ತದೆ. ಭಾರತ ಮತ್ತು ಪಾಕ್ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?
ಬೇಡಿಕೆ ಕಳೆದುಕೊಂಡ ಭಾರತ-ಪಾಕ್ ಪಂದ್ಯ?
ಭಾರತ ಮತ್ತು ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಈ ಬಾರಿ ಪ್ರೇಕ್ಷಕರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಇನ್ನೂ ಮಾರಾಟವಾಗಿಲ್ಲ. ಈ ಪಂದ್ಯದ ಟಿಕೆಟ್‌ಗಳು ಇನ್ನೂ ಐಸಿಸಿ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಇನ್ನೂ ಕೂಡ ಮಾರಾಟವಾಗದಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ಟಿಕೆಟ್ ಬೆಲೆ ದುಬಾರಿಯಾಗಿರುವುದು. ಈ ಪಂದ್ಯಕ್ಕಾಗಿ ಐಸಿಸಿ ಮೂರು ಪ್ಯಾಕೇಜ್‌ಗಳಲ್ಲಿ ಟಿಕೆಟ್‌ಗಳನ್ನು ಇರಿಸಿದೆ. ಇದರಲ್ಲಿ ಡೈಮಂಡ್ ಕ್ಲಬ್, ಪ್ರೀಮಿಯಂ ಕ್ಲಬ್ ಲಾಂಜ್ ಮತ್ತು ಕಾರ್ನರ್ ಕ್ಲಬ್ಗಳನ್ನು ಒಳಗೊಂಡಿವೆ.
ಡೈಮಂಡ್ ಕ್ಲಬ್ ಟಿಕೆಟ್ ಬೆಲೆ 8.34 ಲಕ್ಷ ರೂ. ಈ ಟಿಕೆಟ್ ಖರೀದಿಸುವ ಅಭಿಮಾನಿಗಳಿಗೆ ಅತ್ಯುತ್ತಮ ಸೌಲಭ್ಯಗಳು ಸಿಗುತ್ತವೆ. ಪ್ರೀಮಿಯಂ ಕ್ಲಬ್ ಲಾಂಜ್ ಟಿಕೆಟ್ ಬೆಲೆ 2 ಲಕ್ಷ ರೂ, ಮತ್ತು ಕಾರ್ನರ್ ಕ್ಲಬ್ ಟಿಕೆಟ್ ಬೆಲೆ 2.29 ಲಕ್ಷ ರೂ. ಆಗಿದೆ. ಭಾರತ-ಪಾಕಿಸ್ತಾನ ಪಂದ್ಯದ ದೃಷ್ಟಿಯಿಂದ ಐಸಿಸಿ ಟಿಕೆಟ್ ಬೆಲೆಯನ್ನು ಇಷ್ಟು ದುಬಾರಿ ಇರಿಸಿದೆ. ಇದಲ್ಲದೆ ಪಂದ್ಯಕ್ಕೆ ಉಗ್ರರು ಬಾಂಬ್ ಬೆದರಿಕೆ ಹಾಕಿದ್ದು ಕೂಡ ಅಭಿಮಾನಿಗಳ ಹಿಂದೇಟಿಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಹೆಚ್ಚಿನ ಟಿಕೆಟ್‌ಗಳು ಖರೀದಿಯಾಗದಿದ್ದಲ್ಲಿ ಐಸಿಸಿ ಮತ್ತೆ ಪರಿಷ್ಕೃತ ಟಿಕೆಟ್ ದರ ಹೊರಡಿಡುವ ಸಾಧ್ಯತೆ ಇದೆ.