ಅಹಮದಾಬಾದ್: ರವೀಂದ್ರ ಜಡೇಜಾ(Ravindra Jadeja) ಮತ್ತು ಸೊಸೆ ರಿವಾಬಾ ವಿರುದ್ಧ ಗಂಭೀರ ಆರೋಪ ಮಾಡಿದ್ದ ಜಡೇಜಾ ತಂದೆ ಅನಿರುದ್ಧ ಸಿನ್ಹಾ ಮತ್ತೊಂದು ಆರೋಪ ಮಾಡಿದ್ದಾರೆ. ಜಡೇಜಾ ತನ್ನ ಅತ್ತೆಗೆ 95 ಲಕ್ಷದ ಆಡಿ ಕಾರು ತೆಗೆದುಕೊಟ್ಟಿದ್ದಾನೆ. ನಮ್ಮನ್ನು ಬೀದಿಗೆ ತಳ್ಳಿದ್ದಾನೆ ಎಂದು ಹೇಳಿದ್ದಾರೆ.
“ಜಡೇಜಾನ ಅತ್ತೆ ಯಶಸ್ವಿ ವ್ಯಾಪಾರ ನಡೆಸುತ್ತಿದ್ದಾರೆ ಎಂಬುದು ಸುದ್ದಿ ಸುಳ್ಳು. ಆಡಿ ಕಾರನ್ನು ಜಡೇಜಾ ಅವರಿಗೆ ಆರ್ಡರ್ ಮಾಡಿದ್ದರು. ಚೆಕ್ ನಮ್ಮ ಹೆಸರಿನಲ್ಲಿತ್ತು. ಅವರ ಅತ್ತೆ ಯಾವುದೇ ವ್ಯವಹಾರವನ್ನು ಮಾಡುತ್ತಿರಲಿಲ್ಲ. ಅವರ ಕುಟುಂಬ ರೈಲ್ವೇ ಕ್ವಾರ್ಟರ್ಸ್‌ನಲ್ಲಿ ವಾಸವಾಗಿತ್ತು. ಅವರು ಇತ್ತೀಚೆಗೆ ಜಡೇಜಾ ಹಣದಿಂದ 2 ಕೋಟಿ ಮೌಲ್ಯದ ಬಂಗಲೆಯನ್ನು ಕೂಡ ಖರೀದಿಸಿದ್ದರು” ಎಂದು ಅನಿರುದ್ಧ ಸಿನ್ಹಾ ಹೇಳಿದ್ದಾರೆ.
“ನನ್ನ ಗ್ರಾಮದಲ್ಲಿ ನನಗೆ ಸ್ವಲ್ಪ ಜಮೀನಿದೆ. ನನ್ನ ಹೆಂಡತಿಯ 20,000 ಪಿಂಚಣಿಯಿಂದ ನನ್ನ ವೆಚ್ಚವನ್ನು ನಾನು ನಿರ್ವಹಿಸುತ್ತೇನೆ. ನಾನು 2BHK ಫ್ಲಾಟ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ನನಗೆ ಅಡುಗೆ ಮಾಡುವ ಮನೆ-ಸಹಾಯಕನಿದ್ದಾನೆ. ನಾನು ನನ್ನ ಸ್ವಂತ ಷರತ್ತುಗಳ ಮೇಲೆ ನನ್ನ ಜೀವನವನ್ನು ನಡೆಸುತ್ತಿದ್ದೇನೆ. ನನ್ನ 2BHK ಫ್ಲಾಟ್‌ನಲ್ಲಿಯೂ ಸಹ, ಜಡೇಜಾಗೆ ಇನ್ನೂ ಪ್ರತ್ಯೇಕ ಕೊಠಡಿ ಇದೆ” ಎಂದು ಜಡೇಜಾ ತಂದೆ ಹೇಳಿದ್ದಾರೆ.
“ಜಡೇಜಾನನ್ನು ಕ್ರಿಕೆಟಿಗನನ್ನಾಗಿ ಮಾಡಲು ನಾವು ತುಂಬಾ ಶ್ರಮಿಸಿದ್ದೇವೆ. ಹಣ ಸಂಪಾದಿಸಲು ನಾನು 20 ಲೀಟರ್ ಹಾಲಿನ ಕ್ಯಾನ್‌ಗಳನ್ನು ನನ್ನ ಭುಜದ ಮೇಲೆ ಹೊತ್ತುಕೊಂಡೆ, ವಾಚ್‌ಮ್ಯಾನ್ ಆಗಿಯೂ ಕೆಲಸ ಮಾಡಿದ್ದೇನೆ. ಅವನ ಸಹೋದರಿ ಅವನನ್ನು ತಾಯಿಯಂತೆ ನೋಡಿಕೊಂಡಳು. ಆದರೆ, ಅವನು ತನ್ನ ಸಹೋದರಿಯೊಂದಿಗೆ ಯಾವುದೇ ಸಂಬಂಧವನ್ನು ಇಟ್ಟುಕೊಂಡಿಲ್ಲ. ಪ್ರತಿ ರಕ್ಷಾ ಬಂಧನಕ್ಕೂ ಆಕೆ ಕಣ್ಣೀರು ಸುರಿಸುತ್ತಾಳೆ” ಎಂದು ಸಿನ್ಹಾ ಅಳಲು ತೋಡಿಕೊಂಡರು.
ಗುಜರಾತ್‌ನ ದಿನಪತ್ರಿಕೆ ದಿವ್ಯ ಭಾಸ್ಕರ್‌ಗೆ ನೀಡಿರುವ ಸಂದರ್ಶನದಲ್ಲಿ ಜಡೇಜ ತಂದೆ ಅನಿರುದ್ಧ ಸಿನ್ಹಾ ಈ ಎಲ್ಲ ವಿಚಾರವನ್ನು ಹೇಳಿದ್ದರು. ಶುಕ್ರವಾರ ಈ ಸಂದರ್ಶನದ ಹೇಳಿಕೆಗಳು ಭಾರಿ ಸುದ್ದು ಮಾಡಿತ್ತು. ತಂದೆಯ ಈ ಹೇಳಿಕೆಗೆ ಜಡೇಜಾ ತಿರುಗೇಟು ಕೂಡ ನೀಡಿದ್ದರು. “ನಾನು ರವೀಂದ್ರನನ್ನು ಕರೆಯುವುದಿಲ್ಲ ಮತ್ತು ನನಗೆ ಅವನ ಅಗತ್ಯವಿಲ್ಲ. ಅವನು ನನ್ನ ತಂದೆಯಲ್ಲ. ನಾನು ಅವನ ತಂದೆ. ಅವನು ನನ್ನನ್ನು ಕರೆಯಬೇಕಾದವನು. ನನಗೂ ಮತ್ತು ಜಡೇಜ ಹಾಗೂ ಆತನ ಪತ್ನಿ ರಿವಾಬಾ ನಡುವೆ ಯಾವುದೇ ಸಂಬಂಧ ಉಳಿದಿಲ್ಲ” ಎಂದು ಜಡೇಜಾ ತಂದೆ ಹೇಳಿದ್ದರು.
ತಮ್ಮ ತಂದೆ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ಧ ರವೀಂದ್ರ ಜಡೇಜ, ಪೂರ್ವಯೋಜಿತ ಸಂದರ್ಶನವನ್ನು ನಂಬಬೇಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು.ಅಲ್ಲದೆ, ನನ್ನ ಪತ್ನಿ ಘನತೆಗೆ ಕಳಂಕ ಹಚ್ಚಬೇಡಿ ಎಂದು ಜಡೇಜ ತನ್ನ ತಂದೆಗೆ ಮನವಿ ಮಾಡಿಕೊಂಡಿದ್ದರು. ಅಪ್ಪ ಮಗನ ಜಗಳ ಸದ್ಯ ಬೀದಿಗೆ ಬಂದು ಬಿದ್ದಿದೆ. ಮುಂದೆ ಈ ಜಗಳ ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎನ್ನುವುದು ಕಾದು ನೋಡಬೇಕಿದೆ.