ಮುಂಬಯಿ: ಟಿ20 ವಿಶ್ವಕಪ್ ಗೆದ್ದ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಘೋಷಿಸಿದ್ದ ರವೀಂದ್ರ ಜಡೇಜಾ ಅವರನ್ನು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಇದೀಗ ಕ್ರಿಕೆಟ್ ವಲಯದಲ್ಲಿ ಜಡೇಜಾ(Ravindra Jadeja) ಅವರ ಏಕದಿನ ಕ್ರಿಕೆಟ್ ಬದುಕು ಬಹುತೇಕ ಮುಕ್ತಾಯಗೊಂಡಿದೆ ಎಂದು ಚರ್ಚೆಗಳು ನಡೆಯುತ್ತಿದೆ.
ಅಕ್ಷರ್ ಪಟೇಲ್ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಬಿಸಿಸಿಐ ಯೋಜನೆ ರೂಪಿಸಿದೆ. ಇದೇ ಕಾರಣಕ್ಕೆ ಜಡೇಜಾರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಟಿ20 ವಿಶ್ವಕಪ್ನಲ್ಲಿಯೂ ಜಡೇಜಾ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಅಕ್ಷರ್ ಪಟೇಲ್ ಬ್ಯಾಟಿಂಗ್ ಮತ್ತು ಬೌಲಿಂಗ್ 2 ವಿಭಾಗದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು.
ಇದನ್ನೂ ಓದಿ Ravindra Jadeja: ವಿಶ್ವಕಪ್ ಟ್ರೋಫಿಯೊಂದಿಗೆ ತಾಯಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಜಡೇಜಾ
ಜಡೇಜಾಗೆ ಈಗ 35 ವರ್ಷ, ಮುಂದಿನ ಏಕದಿನ ವಿಶ್ವಕಪ್ ನಡೆಯಲು ಇನ್ನೂ ಮೂರು ವರ್ಷಗಳಿವೆ. 2027ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಈ ವೇಳೆಗೆ ಜಡೇಜಾಗೆ 38 ವರ್ಷ ವಯಸ್ಸಾಗಿರುತ್ತದೆ. ಇಲ್ಲಿಯ ಅವರೆಗೆ ಅವರ ಫಾರ್ಮ್ ಹೇಗಿರುತ್ತದೆ ಎನ್ನುವ ಪ್ರಶ್ನೆ ಕೂಡ ಸಹಜ. ಅಲ್ಲದೆ ಜಡೇಜಾ ಪದೇಪದೆ ಗಾಯಕ್ಕೂ ತುತ್ತಾಗುತ್ತಿರುತ್ತಾರೆ. ಯುವ ಆಟಗಾರರನ್ನು ಬೆಳೆಸುವ ಸಲುವಾಗಿ ಫಾರ್ಮ್ ಕಳೆದುಕೊಂಡ ಹಿರಿಯ ಆಟಗಾರರನ್ನು ಬಿಸಿಸಿಐ ತಂಡದಿಂದ ಕೈಬಿಡುವುದು ಖಚಿತ.
ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಜಡೇಜಾಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಅವರನ್ನು ಏಕದಿನ ತಂಡದಲ್ಲಿ ಮುಂದುವರಿಸುವ ಯೋಜನೆ ಇದಿದ್ದರೆ ಲಂಕಾ ಸರಣಿಯಲ್ಲಿ ಅವಕಾಶ ನೀಡಬೇಕಿತ್ತು. ಅಕ್ಷರ್‌ಗೆ ಹೆಚ್ಚಿನ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾರನ್ನು ಬಿಸಿಸಿಐ ಮುಂದುವರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಜಡೇಜಾ ಭಾರತ ಪರ 197 ಏಕದಿನ ಪಂದ್ಯಗಳನ್ನಾಡಿದ್ದು, 2756 ರನ್ ಕಲೆಹಾಕಿದ್ದಾರೆ. 220 ವಿಕೆಟ್‌ಗಳನ್ನೂ ಪಡೆದಿದ್ದಾರೆ.
ಗಿಲ್ ಭವಿಷ್ಯದ ನಾಯಕ!
ರೋಹಿತ್ ಶರ್ಮ ಬಳಿಕ ಹಾರ್ದಿಕ್ ಪಾಂಡ್ಯ ಅಥವಾ ಕೆ.ಎಲ್ ರಾಹುಲ್ ಏಕದಿನ ತಂಡದ ನಾಯಕ ಎಂದು ಹೇಳಲಾಗಿತ್ತು. ಆದರೆ, ಲಂಕಾ ಸರಣಿಗೆ ತಂಡ ಪ್ರಕಟಿಸುವಾಗ ಯುವ ಆಟಗಾರ ಶುಭಮನ್ ಗಿಲ್ ಅವರನ್ನು ಉಪನಾಯನಾಗಿ ಆಯ್ಕೆ ಮಾಡುವ ಮೂಲಕ ಅವರು ಭವಿಷ್ಯದ ನಾಯಕ ಎಂಬ ಸಂದೇಶವನ್ನು ಬಿಸಿಸಿಐ ನೀಡಿತ್ತು. 2027ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್ ಗೌತಮ್ ಗಂಭೀರ್ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಶುಭಮನ್ ಗಿಲ್‌ಗೆ ಉಪನಾಯಕನ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಏಕದಿನ ತಂಡ
ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.