ಲಂಡನ್: ಶನಿವಾರ ತಡರಾತ್ರಿ ನಡೆದ ಐಪಿಎಲ್ನ(IPL 2024) ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡವನ್ನು ಮಣಿಸಿ ಪ್ಲೇ ಆಫ್ಗೆ ಪ್ರವೇಶಿಸಿತು. ಆರ್ಸಿಬಿಯ ಗೆಲುವಿಗೆ ಫ್ರಾಂಚೈಸಿಯ ಮಾಜಿ ಮಾಲಿಕ ವಿಜಯ್ ಮಲ್ಯ(Vijay Mallya) ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಈ ಮೂಲಕ ಆರ್ಸಿಬಿ ಜತೆಗಿನ ನಂಟನ್ನು ಮುಂದುವರಿಸಿದ್ದಾರೆ.
ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್ಸಿಬಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಮೊದಲ ವಿಕೆಟ್ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ಗೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್ ಎನಿಸಿಕೊಂಡಿತು.
ಇದನ್ನೂ ಓದಿ RCB vs CSK: ಇದು ಆರ್ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್ ಚೆನ್ನೈ ಮಣಿಸಿ ಪ್ಲೇ ಆಫ್ಗೆ ಲಗ್ಗೆ
ಆರ್ಸಿಗೆ ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ 18 ರನ್ ಅಂತರದಿಂದ ಗೆಲುವು ಬೇಕಿತ್ತು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು ಪಂದ್ಯ ಗೆಲ್ಲದಿದ್ದರೂ ಕೂಡ ಪ್ಲೇ ಆಫ್ ಲೆಕ್ಕಾಚಾರದ 201 ರನ್ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರು. 6 ಎಸೆತಗಳಲ್ಲಿ 17 ರನ್ ಬೇಕಿದ್ದಾಗ ಧೋನಿ ಯಶ್ ದಯಾಳ್ ಅವರ ಮೊದಲ ಎಸೆತವನ್ನೇ ಸ್ಟೇಡಿಯಂನಿಂದ ಹೊರಗೆಡೆ ಬಾರಿಸಿ 6 ರನ್ ಕಲೆಹಾಕಿದರು. ಈ ಸಿಕ್ಸರ್ 110 ಮೀಟರ್ ದೂರಕ್ಕೆ ಸಿಡಿಯಿತು. ಆದರೆ ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಇಲ್ಲಿಗೆ ಚೆನ್ನೈ ಸೋಲು ಕೂಡ ಖಚಿತಗೊಂಡಿತು. ಅಂತಿಮ 2 ಎಸೆತದಲ್ಲಿ 10 ರನ್ ಗಳಿಸುವ ಯತ್ನದಲ್ಲಿ ಜಡೇಜಾ ವಿಫಲರಾದರು. ಧೋನಿ 13 ಎಸೆತಗಳಿಂದ 25 ರನ್ ಚಚ್ಚಿದರು. ಆರ್ಸಿಬಿ ಗೆಲುವಿನ ನಗೆ ಬೀರಿತು.
ಆರ್ಸಿಬಿ ಗೆಲುವು ಸಾಧಿಸುತ್ತಿದ್ದಂತೆ ವಿಜಯ್ ಮಲ್ಯ ಟ್ವೀಟ್ ಮಾಡಿ, “ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ತಂಡಕ್ಕೆ ಹೃದಯ ಪೂರಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸತತ ಸೋಲುಗಳಿಂದ ಗೆಲುವಿನ ಟ್ರ್ಯಾಕ್ಗೆ ಮರಳಿರುವುದು ಅದ್ಭುತ. ಟ್ರೋಫಿ ಗೆಲ್ಲುವ ಕಡೆಗೆ ಆರ್ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕು” ಎಂದು ಮುಂದಿನ ಪಂದ್ಯಗಳಿಗೂ ಶುಭ ಹಾರೈಸಿದ್ದಾರೆ. ಇದೇ ವರ್ಷ ಆರ್ಸಿಬಿ ಮಹಿಳಾ ತಂಡ ಡಬ್ಲ್ಯುಪಿಎಲ್ (WPL) ಟೂರ್ನಿಯ ಕಪ್ ಗೆದ್ದಾಗಲೂ ಕೂಡ ವಿಜಯ್ ಮಲ್ಯ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು.
ವಿಶೇಷವೆಂದರೆ ಆರ್ಸಿಬಿಗೆ ಮೇ 18 ಎನ್ನುವುದು ಬಹಳ ಅದೃಷ್ಟದ ದಿನವಾಗಿತ್ತು. ಹೌದು, ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಈ ದಿನದಂದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿತ್ತು. ಹೀಗಾಗಿ ಇಂದು ಕೂಡ ಆರ್ಸಿಬಿ ಗೆಲುವು ಸಾಧಿಸಬಹುದು ಎನ್ನುವುದು ಅಭಿಮಾನಿಗಳ ಬಲವಾದ ನಂಬಿಕೆಯಾಗಿತ್ತು. ಅದರಂತೆ ಆರ್ಸಿಬಿ ಗೆಲುವು ಸಾಧಿಸಿ ಅಭಿಮಾನಿಗಳ ನಂಬಿಕೆಯನ್ನು ಉಳಿಸಿಕೊಂಡಿದೆ.