ಮುಂಬಯಿ: ಟಿ20 ವಿಶ್ವಕಪ್ ಗೆದ್ದ ಬಳಿಕ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದ ನಾಯಕ ರೋಹಿತ್ ಶರ್ಮ(Rohit Sharma) ಅವರು ಕೆಲವೇ ದಿನಗಳಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆದಿತ್ತು. ಅಲ್ಲದೆ ರೋಹಿತ್ಗೂ ಈ ಕುರಿತು ಮಾಧ್ಯಮದವರು ಪ್ರಶ್ನೆ ಕೇಳಿದ್ದರು. ಸ್ವತಃ ರೋಹಿತ್(rohit sharma retirement) ಅವರೇ ತಮ್ಮ ನಿವೃತ್ತಿಯ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಮಾತನಾಡಿದ ರೋಹಿತ್, “ನಾನು ನಿವೃತ್ತಿಯ ಬಗ್ಗೆ ಈಗಲೇ ಏನೂ ಯೋಚನೆ ಮಾಡಿಲ್ಲ. ಜೀವನವು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಪ್ರಸ್ತುತ ನಾನು ಚೆನ್ನಾಗಿ ಆಡುತ್ತಿದ್ದು, ಮುಂದಿನ ಕೆಲ ವರ್ಷಗಳ ಕಾಲ ಭಾರತ ಪರ ಟೆಸ್ಟ್ ಮತ್ತು ಏಕದಿನ ಆಡುವ ಯೋಜನೆಯಲ್ಲಿದ್ದೇನೆ ಎಂದು ಹೇಳುವ ತಮ್ಮ ನಿವೃತ್ತಿ ಕುರಿತ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಸದ್ಯ ರೋಹಿತ್ ವಿಶ್ರಾಂತಿಯಲ್ಲಿದ್ದು ಶ್ರೀಲಂಕಾ ವಿರುದ್ಧದ ಸರಣಿಗೂ ಗೈರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ರೋಹಿತ್ ನಾಯಕತ್ವದಲ್ಲಿ, ಜೂನ್ 29ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.
ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮ(Rohit Sharma) ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(BCCI secretary Jay Shah) ಈಗಾಗಲೇ ಹೇಳಿಕೆ ನೀಡಿದ್ದಾರೆ. ಜತೆಗೆ ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ(Champions Trophy) ಟೂರ್ನಿಯಲ್ಲಿಯೂ ರೋಹಿತ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ Rohit Sharma: ರೋಹಿತ್ ಶರ್ಮಾ ಮಾಜಿ ಗೆಳತಿ ಮಾಡೆಲ್, ನಟಿ ಈಗ ಸನ್ಯಾಸಿನಿ!
ಟಿ20 ವಿಶ್ವಕಪ್ ಗೆದ್ದ ರೋಹಿತ್ ಗೆಲುವಿನ ಬಳಿಕ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್, 4231 ರನ್ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.