Site icon Vistara News

Sachin Tendulkar: ಕಾಶ್ಮೀರದ ಗಲ್ಲಿಯಲ್ಲಿ ಕ್ರಿಕೆಟ್​ ಆಡಿದ ದಿಗ್ಗಜ ಸಚಿನ್​ ತೆಂಡೂಲ್ಕರ್​; ವಿಡಿಯೊ ವೈರಲ್​

Sachin Tendulkar

ಶ್ರೀನಗರ: ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ(jammu and kashmir) ಕುಟುಂಬ ಸಮೇತರಾಗಿ ಮೊದಲ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ಅವರು ಇಲ್ಲಿನ ಹಳ್ಳಿಯೊಂದ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಕ್ರಿಕೆಟ್​ ಆಡಿದ್ದಾರೆ. ಈ ವಿಡಿಯೊ ಇದೀಗ ವೈರಲ್(viral video)​ ಆಗಿದೆ.

ಕಳೆದ ವಾರ ಸಚಿನ್​ ತಮ್ಮ ಪತ್ನಿ ಅಂಜಲಿ, ಪುತ್ರಿ ಸಾರಾ ಜತೆ ಜಮ್ಮು ಮತ್ತು ಕಾಶ್ಮೀರದ ಹಲವು ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಇಲ್ಲಿನ ಸ್ಥಳೀಯ ಮನೆಗಳಿಗೂ ಭೇಟಿ ನೀಡಿ ಚಹಾ ಸೇವಿಸಿದ್ದರು. ಸ್ಥಳೀಯ ಬ್ಯಾಟ್ ಫ್ಯಾಕ್ಟರಿಗೆ ಭೇಟಿ ನೀಡಿದ್ದ ಸಚಿನ್​, ಈ ವೇಳೆ ತಮ್ಮ ಸಹೋದರಿ ಉಡುಗೊರೆಯಾಗಿ ನೀಡಿದ ತಮ್ಮ ಮೊದಲ ಕಾಶ್ಮೀರ ವಿಲ್ಲೋ ಬ್ಯಾಟ್ ಅನ್ನು ನೆನಪಿಸಿಕೊಂಡರು. ಈ ಫೋಟೊ ಮತ್ತು ವಿಡಿಯೊಗಳು ವೈರಲ್​ ಆಗಿತ್ತು. ಇದೀಗ ಕ್ರಿಕೆಟ್​ ಆಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಸಚಿನ್​ ಅವರು ಗುಲ್ಮಾರ್ಗ್ ಪ್ರದೇಶದ ರಸ್ತೆಯೊಂದರಲ್ಲಿ ಇಲ್ಲಿನ ಸ್ಥಳೀಯರೊಂದಿಗೆ ಕ್ರಿಕೆಟ್​ ಆಡಿದ್ದಾರೆ. ಬ್ಯಾಟಿಂಗ್​ ನಡೆಸಿದ ಸಚಿನ್​ ತಮ್ಮ ನೆಚ್ಚಿನ ಕ್ರಿಕೆಟ್ ಶಾಟ್​ಗಳ ಮೂಲಕ ಗಮನಸೆಳೆದರು. ಸ್ಥಳೀಯರು ಕೂಡ ದಿಗ್ಗಜ ಆಟಗಾರನೊಂದಿಗೆ ಆಡಿದ ಸಂತಸವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟ್​ ದೇವರ ಜತೆ ಆಡಿದ್ದು ನಮ್ಮ ಪುಣ್ಯ ಎಂದು ಇಲ್ಲಿನ ಓರ್ವ ನೆಟ್ಟಿಗ ಬರೆದುಕೊಂಡಿದ್ದಾನೆ​.

ಕ್ರಿಕೆಟ್​ ಆಟಗಾರರಿಗೆ ಸ್ಫೂರ್ತಿ


24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

ಸಚಿನ್ ತನ್ನ ಕೊನೆಯ ಟೆಸ್ಟ್​ ಅಂತಾರಾಷ್ಟ್ರೀಯ ಪಂದ್ಯವನ್ನು 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿದ್ದರು. 2012ರಲ್ಲಿ ಅವರು ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಸಾರಸ್ಯವೆಂದರೆ ಸಚಿನ್​ ತಮ್ಮ ಏಕದಿನ ಕ್ರಿಕೆಟ್​ ಪದಾರ್ಪಣೆ ಮಾಡಿದ್ದು ಮತ್ತು ವಿದಾಯ ಹೇಳಿದ್ದು ಪಾಕಿಸ್ತಾನ ತಂಡದ ವಿರುದ್ಧ.

Exit mobile version