ಚೆನ್ನೈ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈಯಲ್ಲಿ ಸಾಗುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತ ಮೇಲುಗೈ ಸಾಧಿಸಿದೆ. ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ(SHAFALI VERMA) ಮತ್ತು ಸ್ಮೃತಿ ಮಂಧಾನ(Smriti Mandhana) ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನಸೆಳೆದರು. ಈ ಪಂದ್ಯದಲ್ಲಿ ಶಫಾಲಿ ಬಿರುಸಿನ ಶತಕ ಬಾರಿಸುವ ಮೂಲಕ 40 ವರ್ಷಗಳ ಹಿಂದಿನ ಟೆಸ್ಟ್ ದಾಖಲೆಯೊಂದನ್ನು ಮುರಿದಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಶಫಾಲಿ ವರ್ಮ ಮತ್ತು ಮಂಧಾನ ಶತಕದ ಆಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿದರು. ಶಫಾಲಿ 113 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಬಾರಿಸಿದ ಮೊದಲ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ಆಟಗಾರ್ತಿ ಜಾನೆಟ್ ಬ್ರಿಟಿನ್ ಹೆಸರಿನಲ್ಲಿತ್ತು. 1984 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 137 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದೀಗ ಈ 40 ವರ್ಷಗಳ ಹಳೆಯ ದಾಖಲೆಯನ್ನು ಶಫಾಲಿ ವರ್ಮಾ ಮುರಿದಿದ್ದಾರೆ.
ಇದನ್ನೂ ಓದಿ T20 World Cup Final: ಚೋಕರ್ಸ್ ಹಣೆಪಟ್ಟಿ ಕಳಚಿಕೊಳ್ಳುವುದೇ ದಕ್ಷಿಣ ಆಫ್ರಿಕಾ?; ನಾಳೆ ಫೈನಲ್
ಸ್ಮೃತಿ ಮಂಧಾನ 122 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಏಕದಿನ ಬಳಿಕ ಟೆಸ್ಟ್ನಲ್ಲಿಯೂ ಶತಕ ಬಾರಿಸಿದ ಸಾಧನೆ ಮಾಡಿದರು. ಒಟ್ಟು 161 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 27 ಫೋರ್ಗಳೊಂದಿಗೆ 149 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು.
ದ್ವಿಶತಕ ಬಾರಿಸಿದ ಶಫಾಲಿ
ಶಫಾಲಿ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವ ಮೂಲಕ ಭಾರತ ಪರ ದ್ವಿಶತಕ ಬಾರಿಸಿದ 2ನೇ ಆಟಗಾರ್ತಿ ಎನಿಸಿಕೊಂಡರು. ಮಿಥಾಲಿ ರಾಜ್ ಅವರು ಭಾರತ ಪರ ಟೆಸ್ಟ್ನಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ್ತಿ. 2002ರಲ್ಲಿ ಇಂಗ್ಲೆಂಡ್ ವಿರುದ್ಧ 214 ರನ್ ಬಾರಿಸಿದ್ದರು.
ಸದ್ಯ ಭಾರತ 3 ವಿಕೆಟ್ ಕಳೆದುಕೊಂಡು 400 ರನ್ಗಳ ಗಡಿ ದಾಟಿದೆ. ಮೊದಲ ದಿನವೇ ಈ ಬೃಹತ್ ಮೊತ್ತ ಪೇರಿಸಿದ್ದನ್ನು ನೋಡುವಾಗ ದಾಖಲೆಯ ಮೊತ್ತವನ್ನು ಗಳಿಸುವ ಸಾಧ್ಯತೆ ಇದೆ. ನಾಯಕಿ ಹರ್ಮನ್ಪ್ರೀತ್ ಮತ್ತು ಜೇಮಿಮಾ ರೋಡ್ರಿಗಸ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 197 ಎಸೆತ ಎದುರಿಸಿದ ಶಫಾಲಿ 23 ಆಕರ್ಷಕ ಬೌಂಡರಿ ಮತ್ತು 8 ಬಿಗ್ ಹಿಟ್ ಸಿಕ್ಸರ್ ನೆರವಿನಿಂದ 205 ರನ್ ಬಾರಿಸಿ ರನೌಟ್ ಸಂಕಟಕ್ಕೆ ಸಿಲುಕಿದರು.