ಬೆಂಗಳೂರು: ಆಸ್ಟ್ರೇಲಿಯಾ ಹಾಗೂ ಆರ್ಸಿಬಿ ತಂಡದ ಮಾಚಿ ಆಟಗಾರ ಶೇನ್ ವಾಟ್ಸನ್(Shane Watson) ಅವರು ಇಂದು(ಮಂಗಳವಾರ) ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ(Presidency University in Bengaluru) ‘ವ್ಯಾಟ್ಸನ್ ದಿ ವಿನ್ನರ್ಸ್ ಮೈಂಡ್ ಸೆಟ್’ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದೇ ವೇಳೆ 2016ರ ಫೈನಲ್ನಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಆರ್ಸಿಬಿ ಅಭಿಮಾನಿಗಳಲ್ಲಿ ಕ್ಷಮೆ(Shane Watson Apologize) ಕೇಳಿದ್ದಾರೆ. ಇದರ ವಿಡಿಯೊ ವೈರಲ್ ಆಗಿದೆ.
ಪುಸ್ತಕ ಬಿಡಿಗಡೆಗೊಳಿಸಿದ ಬಳಿಕ ಮಾತನಾಡಿದ ವಾಟ್ಸನ್, ಕಾಲೇಜಿಗೆ ಭೇಟಿ ನೀಡಿರುವುದು ನಿಜಕ್ಕೂ ಅದ್ಭುತ. ವಿದ್ಯಾರ್ಥಿಗಳು ಕ್ರಿಕೆಟ್ ಆಡುವ ಮತ್ತು ವೀಕ್ಷಿಸುವ ಜತೆಗೆ ಶಿಕ್ಷಣದಲ್ಲಿಯೂ ಗಮನಹರಿಸಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ವಾಟ್ಸನ್ ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕಿದರು.
ಬೆಂಗಳೂರಿನ ಬಗ್ಗೆಯೂ ಅನುಭವ ಹಂಚಿಕೊಂಡ ಅವರು, ಆರ್ಸಿಬಿ ತಂಡಕ್ಕೆ ಇಲ್ಲಿ ಸಿಕ್ಕಪಟ್ಟೇ ಕ್ರೇಜಿ ಫ್ಯಾನ್ಸ್ ಇದ್ದಾರೆ. ನಾನು ಕೂಡ ಈ ತಂಡದ ಪರ ಆಡಿರುವ ಕಾರಣ ಬೆಂಗಳೂರು ಮತ್ತು ಇಲ್ಲಿನ ಜನರ ನಂಟು ಈಗಲೂ ಇದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಕ್ಷಣಗಳು ಅವಿಸ್ಮರಣೀಯ. ಆದರೆ ನನ್ನ ಮನಸ್ಸಲ್ಲಿ ಈಗಲೂ ಇರುವ ನೋವೆಂದರೆ 2016ರ ಐಪಿಎಲ್ ಫೈನಲ್ನಲ್ಲಿ ನಾನು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾದದ್ದು. ನಾನು ಆಡುತ್ತಿದ್ದರೆ ಆರ್ಸಿಬಿ ಕಪ್ ಗೆಲ್ಲುತ್ತಿತ್ತು. ಇದೇ ವಿಚಾರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ ಎಂದು ಹೇಳಿದರು. ಆ ಫೈನಲ್ ಪಂದ್ಯದಲ್ಲಿ ವಾಟ್ಸನ್ 11 ರನ್ ಗಳಿಸಿ ಔಟಾಗಿದ್ದರು.
ಈ ಬಾರಿ ಆರ್ಸಿಬಿ ತಂಡ ಉತ್ತಮವಾಗಿ ಆಡಿದೆ. ಆರಂಭಿಕ ಹಂತದಲ್ಲಿ 7 ಸೋಲು ಕಂಡರೂ ಕೂಡ ಆ ಬಳಿಕ ಸತತವಾಗಿ 6 ಮತ್ತು ಒಟ್ಟಾರೆ 7 ಗೆಲುವಿನೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ. ನಾಳೆ ರಾಜಸ್ಥಾನ್ ವಿರುದ್ಧ ಆಡಲಿದೆ. ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಇದೇ ವೇಳೆ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಕುಲಪತಿ ಡಾ. ನಿಸ್ಸಾರ್ ಅಹಮದ್ ಜತೆ ವಾಟ್ಸನ್ ಕ್ರಿಕೆಟ್ ಆಡಿ ಸಂಭ್ರಮಿಸಿದರು.
ಸದ್ಯ ನಿವೃತ್ತಿ ಜೀವನ ನಡೆಸುತ್ತಿರುವ ವಾಟ್ಸನ್ ಕ್ರಿಕೆಟ್ ಕಾಮೆಂಟ್ರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಐಪಿಎಲ್ ಮಾತ್ರವಲ್ಲದೆ ಇತರ ಕ್ರಿಕೆಟ್ ಲೀಗ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಕಾಮೆಂಟ್ರಿ ಮಾಡುತ್ತಿದ್ದಾರೆ. ‘ವ್ಯಾಟ್ಸನ್ ದಿ ವಿನ್ನರ್ಸ್ ಮೈಂಡ್ ಸೆಟ್’ ಈ ಪುಸ್ತಕದಲ್ಲಿ ಆರ್ಸಿಬಿ ಮತ್ತು ಐಪಿಎಲ್ ಕುರಿತ ವಿಚಾರವು ಅಡಕವಾಗಿದೆ.