ನ್ಯೂಯಾರ್ಕ್: ಡೇವಿಡ್ ಮಿಲ್ಲರ್(59) ಅವರ ಅಜೇಯ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ಶನಿವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ 16ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಸತತ 2 ಗೆಲುವು ದಾಖಲಿಸಿ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ.
ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ(Nassau County International Cricket Stadium) ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ನೆದರ್ಲೆಂಡ್ಸ್(NED vs RSA) ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್(40) ಉಪಯುಕ್ತ ಬ್ಯಾಟಿಂಗ್ ನರೆವಿನಿಂದ 9 ವಿಕೆಟ್ಗೆ 103 ರನ್ ಬಾರಿಸಿತು. ಜವಾಬಿತ್ತ ದಕ್ಷಿಣ ಆಫ್ರಿಕಾ ಈ ಸಣ್ಣ ಮೊತ್ತವನ್ನು ಬಾರಿಸಲು 6 ವಿಕೆಟ್ ಕಳೆದುಕೊಂಡು ಕೊನೆಗೂ 106 ರನ್ ಬಾರಿಸಿ ಗೆಲುವು ದಾಖಲಿಸಿತು.
ಬ್ಯಾಟಿಂಗ್ಗೆ ಯೋಗ್ಯವಲ್ಲದ ಪಿಚ್ನಲ್ಲಿ ಉಭಯ ತಂಡಗಳ ಬ್ಯಾಟರ್ಗಳು ರನ್ ಗಳಿಸಲು ಪರದಾಟ ನಡೆಸಿದರು. ಚೀಸಿಂಗ್ ವೇಳೆ ದಕ್ಷಿಣ ಆಫ್ರಿಕಾ ಮೊದಲ ಎಸೆತದಲ್ಲೇ ಕ್ವಿಂಟನ್ ಡಿ ಕಾಕ್(0) ಅವರ ವಿಕೆಟ್ ಕಳೆದುಕೊಂಡಿತು. ಸಂವಹನ ಕೊರತೆಯಿಂದಾಗಿ ಇಲ್ಲದ ರನ್ ಗಳಿಸುವ ಯತ್ನದಲ್ಲಿ ರನೌಟ್ಗೆ ಬಲಿಯಾದರು. ಈ ವಿಕೆಟ್ ಪತನಗೊಂಡು 3 ರನ್ ಆಗುವಷ್ಟರಲ್ಲಿ ಮತ್ತೆರಡು ವಿಕೆಟ್ ಕೂಡ ಪತನಗೊಂಡಿತು. ರೀಜಾ ಹೆಂಡ್ರಿಕ್ಸ್(3) ಮತ್ತು ನಾಯಕ ಐಡೆನ್ ಮಾರ್ಕ್ರಾಮ್(0) ವಿಕೆಟ್ ಕೈಚೆಲ್ಲಿದರು. 3 ರನ್ಗೆ 3 ವಿಕೆಟ್ ಕಳೆದುಕೊಂಡ ಹರಿಣ ಪಡೆ ಆರಂಭಿಕ ಆಘಾತ ಎದುರಿಸಿತು.
ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಒಂದು ಹಂತದಲ್ಲಿ ಆಸರೆಯಾಗುವ ಸೂಚನೆ ನೀಡಿದ್ದ ಅಪಾಯಕಾರಿ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಕೂಡ 4 ರನ್ಗೆ ಆಟ ಮುಗಿಸಿದರು. ನಾಟಕೀಯ ಕುಸಿತ ಕಂಡ ದಕ್ಷಿಣ ಆಫ್ರಿಕಾಗೆ ಆಸರೆಯಾದದ್ದು ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟಾನ್ ಸ್ಟಬ್ಸ್. ಉಭಯ ಆಟಗಾರರು ತಾಳ್ಮೆಯುತ ಬ್ಯಾಟಿಂಗ್ ನಡೆಸಿ 5ನೇ ವಿಕೆಟ್ಗೆ 65 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಈ ಜೋಡಿ ನಿಂತು ಆಡದೇ ಹೋಗಿದ್ದರೆ ಹರಿಣ ಪಡೆಗೆ ಸೋಲು ಖಚಿತವಾಗುತ್ತಿತ್ತು.
ಇದನ್ನೂ ಓದಿ French Open Final 2024: 4ನೇ ಫ್ರೆಂಚ್ ಓಪನ್ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್
ಟ್ರಿಸ್ಟಾನ್ ಸ್ಟಬ್ಸ್ 37 ಎಸೆತಗಳಿಂದ 33 ರನ್ ಬಾರಿಸಿ ಬಾಸ್ ಡಿ ಲೀಡೆಗೆ ವಿಕೆಟ್ ಒಪ್ಪಿಸಿದರು. ಇವರ ವಿಕೆಟ್ ಪತನದ ಬಳಿಕ ಬಂದ ಮಾರ್ಕೊ ಜಾನ್ಸೆನ್ 3 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಈ ವೇಳೆ ತಂಡಕ್ಕೆ ಕೊಂಚ ಆತಂಕ ಎದುರಾದರೂ ಕೂಡ ಡೇವಿಡ್ ಮಿಲ್ಲರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಯಾವುದೇ ಹಾನಿಯಾಗದಂತೆ ನೋಡಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಿದರು. ಮಿಲ್ಲರ್ 51 ಎಸೆತ ಎದುರಿಸಿ ಅಜೇಯ 59 ರನ್ ಬಾರಿಸಿದರು. ಅವರ ಈ ಅರ್ಧಶತಕದ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 4 ಸೊಗಸಾದ ಸಿಕ್ಸರ್ ಮತ್ತು 3 ಬೌಂಡರಿ ಸಿಡಿಯಿತು. ಪಂದ್ಯ ಸೋತರೂ ಕೂಡ ನೆದರ್ಲೆಂಡ್ಸ್ ತಂಡದ ಹೋರಾಟವನ್ನು ಮೆಚ್ಚಲೇ ಬೇಕು.
ಮೊದಲು ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ ಕೂಡ 17 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಇನ್ನೇನು 50ರ ಒಳಗೆ ಗಂಟು ಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಮತ್ತು 8ನೇ ಕ್ರಮಾಂಕದಲ್ಲಿ ಆಡಿದ ವ್ಯಾನ್ ಬೀಕ್ ನಡೆಸಿದ ಸಣ್ಣ ಮಟ್ಟಿನ ಬ್ಯಾಟಿಂಗ್ ಹೋರಾಟದಿಂದ ತಂಡ 100ರ ಗಡಿ ದಾಟಿತು. ಎಂಗಲ್‌ಬ್ರೆಕ್ಟ್ 2 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 40 ರನ್ ಬಾರಿಸಿದರೆ, ವ್ಯಾನ್ ಬೀಕ್ 3 ಬೌಂಡರಿ ನೆರವಿನಿಂದ 23 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಒಟ್ನೀಲ್ ಬಾರ್ಟ್ಮನ್ ಘಾತಕ ಬೌಲಿಂಗ್ ನಡೆಸಿ ಕೇವಲ 11 ರನ್ ವೆಚ್ಚದಲ್ಲಿ ಪ್ರಮುಖ 4 ವಿಕೆಟ್ ಕಿತ್ತರು. ಉಳಿದಂತೆ ಮಾರ್ಕೊ ಜಾನ್ಸೆನ್ ಮತ್ತು ಅನ್ರಿಚ್ ನೋರ್ಜೆ ತಲಾ 2 ವಿಕೆಟ್ ಪಡೆದರು.