ಬೆಂಗಳೂರು: 17 ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup 2024) ಗೆದ್ದ ಟೀಮ್ ಇಂಡಿಯಾಕ್ಕೆ, ಚೊಚ್ಚಲ ಟಿ20 ವಿಶ್ವಕಪ್(T20 World Cup Win) ಗೆದ್ದ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ವಿಶೇಷವಾಗಿ ಶುಭ ಹಾರೈಸಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಭಾರತೀಯ ಕ್ರಿಕೆಟ್ ತಂಡಕ್ಕೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು. ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಪತಿ-ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹೊಗಳಿ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮಗಳು ವಾಮಿಕಾ ಬಗ್ಗೆ ಘಟನೆವೊಂದನ್ನು ಹಂಚಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಪೋಸ್ಟ್‌ನಲ್ಲಿ ʻʻನಮ್ಮ ಮಗಳ ದೊಡ್ಡ ಕಾಳಜಿ ಏನೆಂದರೆ, ಎಲ್ಲಾ ಆಟಗಾರರು ಟಿವಿಯಲ್ಲಿ ಅಳುತ್ತಿರುವುದನ್ನು ನೋಡಿದ ನಂತರ ಅವರನ್ನು ತಬ್ಬಿಕೊಳ್ಳಲು ಯಾರಾದರೂ ಇದ್ದರೆ ಎಂದು. ಆಗ ನಾನು ಅಂದೆ ..ಹೌದು, ಅವರನ್ನು 1.5 ಬಿಲಿಯನ್ ಜನರು ತಬ್ಬಿಕೊಂಡರು ಎಂದೆ. ಎಂತಹ ಅದ್ಭುತ ಗೆಲುವು ಮತ್ತು ಎಂತಹ ಪೌರಾಣಿಕ ಸಾಧನೆ!! ಚಾಂಪಿಯನ್ಸ್ – ಅಭಿನಂದನೆಗಳು!! ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಅನುಷ್ಕಾ ಅವರು ವಿರಾಟ್ ಮುಗುಳ್ನಕ್ಕು ಟ್ರೋಫಿಯನ್ನು ಎತ್ತುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: T20 World Cup 2024: ಸುದೀಪ್ ಸೇರಿದಂತೆ ಸೌತ್ ,ಬಾಲಿವುಡ್ ತಾರೆಯರು ವಿಶ್ವಕಪ್ ಗೆಲುವನ್ನು ಸಂಭ್ರಮಿಸಿದ್ದು ಹೀಗೆ!
ವಿದಾಯ ಹೇಳಿದ ರೋಹಿತ್
ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್ ಗೆದ್ದ ರೋಹಿತ್ ಗೆಲುವಿನ ಬಳಿಕ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್, 4231 ರನ್ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.
ರೋಚಕ ಪಂದ್ಯ ಗೆದ್ದ ಭಾರತ
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೆಯ ಓವರ್ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್ ಮಿಲ್ಲರ್ ವಿಕೆಟ್ ಕೈಚೆಲ್ಲಿದರು. ಎರಡನೇ ಎಸೆತವನ್ನು ರಬಾಡಾ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಹಾರ್ದಿಕ್ ಒಂದು ವೈಡ್ ಎಸೆದರು. ರಬಾಡಾ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಮಾತ್ರ ಬಂತು. ಭಾರತ 7 ರನ್ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದು ಬೀಗಿತು.