Site icon Vistara News

T20 World Cup 2024: ಶೀಘ್ರದಲ್ಲೇ ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಮಾಯಾಂಕ್‌ ಯಾದವ್​ಗೆ ಸ್ಥಾನ ಖಚಿತ

T20 World Cup 2024

ಮುಂಬಯಿ: ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್​(T20 World Cup 2024) ಟೂರ್ನಿ ಜೂನ್ 1 ರಿಂದ 29 ರ ವರೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಟೂರ್ನಿಯ ಪಂದ್ಯಾವಳಿಗಾಗಿ ಟೀಮ್​ ಇಂಡಿಯಾದ 15 ಸದಸ್ಯರ ತಂಡ ಏಪ್ರಿಲ್‌ ಕೊನೆಯ ವಾರದಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ಇಶಾನ್​ ಕಿಶನ್(Ishan Kishan)ಗೆ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ. ಆದರೆ, ಈ ಬಾರಿಯ ಐಪಿಎಲ್‌ನಲ್ಲಿ ಶರವೇಗದ ಎಸೆತಗಳ ಮೂಲಕ ಭಾರೀ ಸಂಚಲನ ಮೂಡಿಸಿದ ಲಕ್ನೋ ತಂಡದ ಯುವ ವೇಗಿ ಮಾಯಾಂಕ್‌ ಯಾದವ್‌(Mayank Yadav)ಗೆ ಸ್ಥಾನ ಸಿಗಲಿದೆ ಎಂಬುದಾಗಿ ಬಿಸಿಸಿಐ ಮೂಲವೊಂದು ತಿಳಿಸಿದೆ.

ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ಸ್ಪಿನ್ನರ್​ ಯಜುವೇಂದ್ರ ಚಹಲ್​ ಕೂಡ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಅವರು ಪ್ರಸ್ತುತ ಐಪಿಎಲ್​ನಲ್ಲಿ ತೋರುತ್ತಿರುವ ಶ್ರೇಷ್ಠ ಬೌಲಿಂಗ್​ ಪ್ರದರ್ಶನ. ಬಿಸಿಸಿಐ ಮತ್ತು ಕೋಚ್​ ಸಲಹೆಯನ್ನು ಕಡೆಗಣಿಸಿ ದೇಶೀಯ ಕ್ರಿಕೆಟ್​ ಆಡಲು ಅಸಡ್ಡೆ ತೋರಿದ ಇಶಾನ್​ ಕಿಶನ್​ ಮತ್ತು ಶ್ರೇಯಸ್​ ಅಯ್ಯರ್ ಸ್ಥಾನವಿಲ್ಲ ಎನ್ನಲಾಗಿದೆ. ಜತೆಗೆ ಕೆ.ಎಲ್​ ರಾಹುಲ್​ಗೂ ಅವಕಾಶ​ ಸಿಗುವ ಸಾಧ್ಯತೆ ಕಡಿಮೆ. ಐಪಿಎಲ್​ನಲ್ಲಿಯೂ ಇದುವರೆಗೆ ಹೇಳುವಂತ ಪ್ರದರ್ಶನ ಕಂಡುಬಂದಿಲ್ಲ.

14 ತಿಂಗಳ ಬಳಿಕ ಕ್ರಿಕೆಟ್​ಗೆ ಮರಳಿದ ರಿಷಭ್​ ಪಂತ್ ಅವರ ಪ್ರದರ್ಶನದ ಮೇಲೆ ರಾಹುಲ್ ಟಿ20 ವಿಶ್ವಕಪ್​ ಭವಿಷ್ಯ ಅಡಗಿತ್ತು.​​ ಪಂತ್​ ವಿಫಲಗೊಂಡರೆ ರಾಹುಲ್​ಗೆ ಅವಕಾಶ ಸಿಗುತ್ತಿತ್ತು. ಆದರೆ ಪಂತ್​ ಬ್ಯಾಟಿಂಗ್​ ಮತ್ತು ಕೀಪಿಂಗ್​ನಲ್ಲಿ ಮಿಂಚಿದ್ದಾರೆ. ಮಾಯಾಂಕ್‌ ಯಾದವ್‌ ಐಪಿಎಲ್​ನಲ್ಲಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್​ ನಡೆಸಿ ಗಮನ ಸೆಳೆದಿದ್ದಾರೆ. ಗುಡ್​ ಲೆಂತ್​ ಆ್ಯಂಡ್​ ಲೈನ್​ನಲ್ಲಿ ಬೌಲಿಂಗ್​ ಕೂಡ ಮಾಡುತ್ತಾರೆ. ಹೀಗಾಗಿ ಇವರಿಗೆ ಬಿಸಿಸಿಐ ಮಣೆ ಹಾಕಲಿದೆ ಎನ್ನಲಾಗಿದೆ.

ಇದನ್ನೂ ಓದಿ T20 World Cup 2024: ಇಂಡೋ-ಪಾಕ್ ಪಂದ್ಯ ನಡೆಯುವ​ ಸ್ಟೇಡಿಯಂ ನಿರ್ಮಾಣದ 2ನೇ ವಿಡಿಯೊ ಹಂಚಿಕೊಂಡ ಐಸಿಸಿ

ವಿಶ್ವಕಪ್​ಗೆ ಭಾರತ ಸಂಭಾವ್ಯ ತಂಡ


ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಸಿರಾಜ್, ಮಯಾಂಕ್ ಯಾದವ್, ಯಜುವೇಂದ್ರ ಚಹಲ್​.

ಭಾರತಕ್ಕೆ ಐರ್ಲೆಂಡ್ ಮೊದಲ ಎದುರಾಳಿ

ಈಗಾಗಲೇ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಇದೇ ಕಾರಣದಿಂದ ಆಯ್ಕೆ ಸಮಿತಿಯು ಭಾರತದ ಮೊದಲ ಸಂಭಾವ್ಯ ತಂಡವನ್ನು ಎಪ್ರಿಲ್‌ ಕೊನೆಯ ವಾರದಲ್ಲಿ ಪ್ರಕಟಿಸಲಿದೆ ಎನ್ನಲಾಗಿದೆ. ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

Exit mobile version