ಸಿಡ್ನಿ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ(IPL 2024) ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಭಾರೀ ಸಂಚಲನ ಸೃಷ್ಟಿಸಿದ್ದ ಯುವ ಬ್ಯಾಟರ್ ಜೇಕ್ ಫ್ರೇಸರ್-ಮೆಕ್‌ಗುರ್ಕ್(Jake Fraser-McGurk) ಅವರನ್ನು ಕೊನೆಗೂ ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿನ ತಿಂಗಳು ಆರಂಭಗೊಳ್ಳಲಿರುವ ಟಿ20 ವಿಶ್ವಕಪ್(T20 World Cup 2024) ಟೂರ್ನಿಗೆ ಪ್ರಯಾಣದ ಮೀಸಲು ಆಟಗಾರನಾಗಿ ಆಯ್ಕೆ ಮಾಡಿದೆ. ಇವರ ಜತೆಗೆ ಮ್ಯಾಟ್ ಶಾರ್ಟ್ ಕೂಡ ಅವಕಾಶ ಪಡೆದಿದ್ದಾರೆ. ಉಭಯ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ ವಿಚಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದೆ. ಆಸ್ಟ್ರೇಲಿಯಾ(Australia T20 World Cup squad) ತನ್ನ ಮೊದಲ ಪಂದ್ಯವನ್ನು ಜೂನ್ 3ರಂದು ಉಗಾಂಡ ವಿರುದ್ಧ ಆಡಲಿದೆ.
ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.
ಡೆಲ್ಲಿ ತಂಡದ ಪರ ಅತಿ ಕಡಿಮೆ ಎಸೆತಗಳಿಂದ ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಫ್ರೇಸರ್-ಮೆಕ್‌ಗುರ್ಕ್ ಪಾತ್ರರಾಗಿದ್ದರು. ಜತೆಗೆ ಈ ಆವೃತ್ತಿಯ ಐಪಿಎಲ್ನಲ್ಲಿ ಅತಿ ಕಡಿಮೆ ಎಸೆತಗಳಿಂದ(15) ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಕೂಡ ಬರೆದಿದ್ದರು. ಈ ಬಾರಿ ಒಟ್ಟು 9 ಐಪಿಎಲ್ ಪಂದ್ಯಗಳನ್ನಾಡಿದ ಮೆಕ್‌ಗುರ್ಕ್ 330 ರನ್ ಬಾರಿಸಿದ್ದಾರೆ. 84 ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಇದನ್ನೂ ಓದಿ T20 World Cup 2024: ಇಂಡೋ-ಪಾಕ್ ಮಿನಿ ವಿಶ್ವಕಪ್ ಸಮರ ನಡೆಯುವ ಸ್ಟೇಡಿಯಂನ ವಿಡಿಯೊ ವೈರಲ್
ಲುಂಗಿ ಎನ್‌ಗಿಡಿ ಬದಲಿಗೆ ಆಲ್ರೌಂಡರ್ ಜೇಕ್ ಫ್ರೇಸರ್-ಮೆಕ್‌ಗುರ್ಕ್(Jake Fraser-McGurk) ಅವರನ್ನು ಡೆಲ್ಲಿ ತಂಡ ಬದಲಿ ಆಟಗಾರನಾಗಿ ಮೂಲಬೆಲೆ 50 ಲಕ್ಷ ರೂ.ಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಮೆಕ್‌ಗುರ್ಕ್ ಲಿಸ್ಟ್ ಎ ಪಂದ್ಯದಲ್ಲಿ ಕೇವಲ 29 ಎಸೆತದಲ್ಲಿ ಶತಕ ಬಾರಿಸಿ ಅತ್ಯಂತ ವೇಗದ ಶತಕದ ವಿಶ್ವದಾಖಲೆ ಬರೆದಿದ್ದರು. ಈ ಬಾರಿಯ ಐಪಿಎಲ್ನಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರತಾಪ ತೋರಿಸಿದ್ದರು. ಮುಂದಿನ ಬಾರಿ ಇವರಿಗೆ ಹರಾಜಿನಲ್ಲಿ ದುಬಾರಿ ಬೆಲೆ ಸಿಗುವ ಸಾಧ್ಯತೆ ಇದೆ.
ಮಿಚೆಲ್ ಮಾರ್ಷ್ ತಂಡದ ನಾಯಕನಾಗಿದ್ದಾರೆ.
ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿರುವ ಡೇವಿಡ್ ವಾರ್ನರ್, ಟಿಮ್ ಡೇವಿಡ್ ಅವರನ್ನು ಬ್ಯಾಟಿಂಗ್ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಕ್ಯಾಮರೂನ್ ಗ್ರೀನ್ ತಂಡದ ಸ್ಟಾರ್ ಆಲ್ರೌಂಡರ್ಗಳಾಗಿದ್ದಾರೆ. ಸ್ಪಿನ್ಸ್ ಬೌಲರ್ಗಳಾಗಿ ಆ್ಯಡಂ ಝಂಪಾ ಮತ್ತು ಆ್ಯಶ್ಟನ್ ಅಗರ್ ಸ್ಥಾನ ಪಡೆದಿದ್ದಾರೆ. ವೇಗಿಗಳಾಗಿ ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಆ್ಯಶ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ. ಪ್ರಯಾಣದ ಮೀಸಲು ಆಟಗಾರರು: ಮ್ಯಾಟ್ ಶಾರ್ಟ್, ಜೇಕ್ ಫ್ರೇಸರ್-ಮೆಕ್‌ಗುರ್ಕ್