ನ್ಯೂಯಾರ್ಕ್: ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ತಂಡ(pakistan team) ಪ್ರಸಕ್ತ ಟಿ20 ವಿಶ್ವಕಪ್(T20 World Cup 2024) ಟೂರ್ನಿಯಲ್ಲಿ ಆಡಿದ 2 ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಇನ್ನು 2 ಪಂದ್ಯಗಳು ಮಾತ್ರ ಬಾಕಿ ಉಳಿದಿದೆ. ಪಾಕ್ 2 ಸೋಲು ಕಂಡಿದ್ದರೂ ಕೂಡ ಸೂಪರ್-8 ಪ್ರವೇಶಿಸುವ ಕ್ಷೀಣ ಅವಕಾಶವೊಂದಿದೆ. ಜತೆಗೆ ಅದೃಷ್ಟ ಕೂಡ ಕೈಹಿಡಿಯಬೇಕಿದೆ.
ಸದ್ಯ ‘ಎ’ ಗುಂಪಿನಲ್ಲಿ ಭಾರತ ಮತ್ತು ಆತಿಥೇಯ ಅಮೆರಿಕ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ತಲಾ 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿದೆ. ಒಂದು ಪಂದ್ಯ ಗೆದ್ದ ಕೆನಾಡ ಮೂರನೇ ಸ್ಥಾನದಲ್ಲಿದೆ. ಗೆಲುವೇ ಕಾಣದ ಪಾಕಿಸ್ತಾನ 4ನೇ ಸ್ಥಾನಿಯಾಗಿದೆ. ಪಾಕ್ ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ಮತ್ತು ಕೆನಡಾ ವಿರುದ್ಧ ಆಡಲಿದೆ. ಒಂದು ಗುಂಪಿನಿಂದ ಎರಡು ತಂಡಗಳು ಮಾತ್ರ ಸೂಪರ್ 8ಗೆ ಪ್ರವೇಶ ಪಡೆಯಲಿದೆ. ಪಾಕ್ಗೂ ಕೂಡ ಈ ಹಂತಕ್ಕೇರಲು ಸಣ್ಣ ಅವಕಾಶವೊಂದಿದೆ. ಈ ಲೆಕ್ಕಾಚಾರ ಹೀಗಿದೆ.
ಸೂಪರ್-8ಗೆ ಪ್ರವೇಶಿಸಲು ಪಾಕಿಸ್ತಾನ ತಂಡವು ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಅಷ್ಟೇ ಅಲ್ಲದೆ ಯುಎಸ್‌ಎ ಮತ್ತು ಕೆನಡಾ ತಂಡಗಳು ಗುಂಪು ಹಂತದಲ್ಲಿ ಉಳಿದ ಪಂದ್ಯಗಳಲ್ಲಿ ಸೋಲು ಕಾಣಬೇಕು. ಅಮೆರಿಕ ಮುಂದಿನ 2 ಪಂದ್ಯಗಳಲ್ಲಿ ಸೋಲು ಕಂಡು, ಪಾಕ್ 2 ಪಂದ್ಯ ಗೆದ್ದರೆ ಉಭಯ ತಂಡಗಳಿಗೆ ತಲಾ 4 ಅಂಕ ಆಗಲಿದೆ. ಹೀಗಾಗಿ ಪಾಕ್ಗೆ ಕೇವಲ ಗೆಲುವು ಮಾತ್ರ ಸಾಲದು ಜತೆಗೆ ರನ್ರೇಟ್ ಕೂಡ ಬೇಕಾಗಿದೆ. ಅಮೆರಿಕ ಮತ್ತು ಭಾರತ ಮುಂದಿನ ಪಂದ್ಯದಲ್ಲಿ ಗೆದ್ದರೆ ಪಾಕ್ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.
ಇದನ್ನೂ ಓದಿ RSA vs BAN: ಹ್ಯಾಟ್ರಿಕ್ ಗೆಲುವು ಸಾಧಿಸಿ ಸೂಪರ್-8 ಹಂತಕ್ಕೆ ಲಗ್ಗೆಯಿಟ್ಟ ದಕ್ಷಿಣ ಆಫ್ರಿಕಾ
ಗೆಲ್ಲುವ ಪಂದ್ಯ ಸೋತ ಪಾಕ್
ಭಾನುವಾರ ನಡೆದಿದ್ದ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವಿನ ಅಂಜಿಗೆ ಹೋಗಿ ಆ ಬಳಿಕ ಕುಸಿತ ಕಂಡು ಸೋಲಿಗೆ ತುತ್ತಾಗಿತ್ತು. ಮಳೆ ಪೀಡಿತ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ಕೇವಲ 119 ರನ್ ಬಾರಿಸಿತು. ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಒಂದು ಹಂತದ ವರೆಗೆ ಉತ್ತಮವಾಗಿ ಆಡಿದರೂ ಕೂಡ ಆ ಬಳಿಕ ಭಾರತೀಯ ಬೌಲರ್ಗಳ ಘಾತಕ ಬೌಲಿಂಗ್ ದಾಳಿಗೆ ರನ್ ಗಳಿಸಲು ವಿಫಲವಾಗಿ ಆಘಾತಕಾರಿ ಸೋಲು ಕಂಡಿತ್ತು.