Site icon Vistara News

T20 World Cup: ಟಿ20 ವಿಶ್ವಕಪ್​ನ 3 ಪಿಚ್​ಗಳಿಗೆ ಕಳಪೆ ರೇಟಿಂಗ್​ ಕೊಟ್ಟ ಐಸಿಸಿ

T20 World Cup

T20 World Cup: ICC Finally Reveals Ratings For T20 World Cup 2024 Pitches In New York. They Are...

ದುಬೈ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಪುರುಷರ ಟಿ20 ವಿಶ್ವಕಪ್​ ಟೂರ್ನಿ(T20 World Cup) ಮುಕ್ತಾಯ ಕಂಡು 2 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪಿಚ್ ರೇಟಿಂಗ್‌ಗಳನ್ನು ಬಿಡುಗಡೆ ಮಾಡಿದೆ. ಎಲ್ಲಾ 52 ಪೂರ್ಣಗೊಂಡ ಪಂದ್ಯಗಳನ್ನು ಒಳಗೊಂಡಿರುವ ವರದಿಯಲ್ಲಿ ಮೂರು ಪಂದ್ಯಗಳ ಪಿಚ್​ಗಳನ್ನು ಅತೃಪ್ತಿಕರ ಎಂದು ಪರಿಗಣಿಸಿದೆ.

ಎಂಟು ಗುಂಪು-ಹಂತದ ಪಂದ್ಯಗಳನ್ನು ಆಯೋಜಿಸಿದ್ದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಪಿಚ್​ ಅನ್ನು ಅತ್ಯಂತ ಕೆಟ್ಟ ಪಿಚ್​ ಎಂದು ಪರಿಗಣಿಸಲಾಗಿದೆ. ಇಲ್ಲಿ ನಡೆದಿದ್ದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ, ಭಾರತ ಮತ್ತು ಐರ್ಲೆಂಡ್ ಪಂದ್ಯಗಳ ಪಿಚ್‌ಗಳನ್ನು ‘ಅತೃಪ್ತಿಕರವಾಗಿಲ್ಲ’ ಎಂದು ಐಸಿಸಿ ರೇಟಿಂಗ್​ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ 77 ರನ್‌ಗಳಿಗೆ ಆಲೌಟ್ ಆಗಿದ್ದರೆ, ಭಾರತದ ವಿರುದ್ಧ ಐರ್ಲೆಂಡ್ ಕೇವಲ 96 ರನ್ ಗಳಿಸಿತು. ಈ ಸ್ಟೇಡಿಯಂನ ಪಿಚ್​ನಲ್ಲಿ ಗರಿಷ್ಠ ರನ್​ ದಾಖಲಾದದ್ದು 137 ರನ್​. ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಈ ಮೊತ್ತ ದಾಖಲಾಗಿತ್ತು. ವೆಸ್ಟ್​ ಇಂಡೀಸ್​ನ ಟ್ರಿನಿಡಾಡ್ ಪಿಚ್​ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ನಡುವಣ ಸೆಮಿಫೈನಲ್​ ಪಂದ್ಯವನ್ನು ಕೂಡ ಅತೃಪ್ತಿಕರ ಎಂದು ಪರಿಗಣಿಸಿದೆ.

ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿನ ಪಿಚ್​ ಬಗ್ಗೆ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ, ಕೋಚ್​ ಆಗಿದ್ದ ರಾಹುಲ್​ ದ್ರಾವಿಡ್​ ಅವರು ಅಂದೇ ಅಸಾಮಾಧಾನ ವ್ಯಕ್ತಪಡಿಸಿದ್ದರು. ಇದು ಕ್ರಿಕೆಟ್​ ಆಡಲು ಸೂಕ್ತವಾಗಿಲ್ಲ ಎಂದು ಹೇಳಿದ್ದರು. ಈ ಮೈದಾನಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾಗಿದ್ದ ಡ್ರಾಪ್-ಇನ್ ಪಿಚ್‌ಗಳನ್ನು ಅಳವಡಿಸಲಾಗಿತ್ತು. ಒಟ್ಟಾರೆಯಾಗಿ, ಐಸಿಸಿ 31 ಪಿಚ್‌ಗಳನ್ನು ‘ತೃಪ್ತಿದಾಯಕ’ ಮತ್ತು 18 ಪಿಚ್​ಗಳನ್ನು ‘ತುಂಬಾ ಒಳ್ಳೆಯದು’ ಎಂಬ ರೇಟಿಂಗ್​ ನೀಡಿದೆ.

ಇದನ್ನೂ ಓದಿ ICC Women’s T20 World Cup: ಯುಎಇಗೆ ಸ್ಥಳಾಂತರಗೊಂಡ ಮಹಿಳಾ ಟಿ20 ವಿಶ್ವಕಪ್

ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್​ 29ರಂದು ನಡೆದಿದ್ದ ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತ್ತು.

ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​ ಅವರು ಬೌಂಡರಿ ಲೈನ್​ನಲ್ಲಿ ಹಿಡಿದ ಡೇವಿಡ್ ಮಿಲ್ಲರ್​ ಅವರ ಕ್ಯಾಚ್​ ಭಾರೀ ಚರ್ಚೆಗೆ ಕಾರಣವಾಗಿತ್ತು.​ ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಮಿಲ್ಲರ್​ ಔಟ್​ ಆಗುತ್ತಿದ್ದಂತೆ ಭಾರತದ ಗೆಲುವು ಕೂಡ ಖಚಿತಗೊಂಡಿತ್ತು. ಆದರೆ, ಈ ಕ್ಯಾಚ್​ ಹಿಡಿಯುವ ವೇಳೆ ಸೂರ್ಯಕುಮಾರ್​ ಅವರ ಕಾಲುಗಳು ಬೌಂಡರಿ ಲೈನ್​ನ ಕೆಳ ಭಾಗದ ಪಟ್ಟಿಗೆ ತಾಗಿದೆ ಎಂದು ಆರೋಪ ಮಾಡಿದ್ದರು. ಬಳಿಕ ಐಸಿಸಿ ಹಲವು ಆಯಾಮಗಳ ವಿಡಿಯೊ ಹಂಚಿಕೊಳ್ಳುವ ಮೂಲಕ ಸೂರ್ಯ ಹಿಡಿದ ಕ್ಯಾಚ್​ನಲ್ಲಿ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು.

Exit mobile version