ಮುಂಬಯಿ: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ತಂಡ ಕೋಚ್ ಬದಲಾವಣೆಯಾಗುವುದು ಖಚಿತವಾಗಿದೆ. ಸದ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಹೀಗಾಗಿ, ಮುಂದಿನ ಮೂರೂವರೆ ವರ್ಷಗಳ ಅವಧಿಗೆ ಮುಖ್ಯ ಕೋಚ್ ಹುದ್ದೆಗಾಗಿ(Team India Coach) ಬಿಸಿಸಿಐ(BCCI) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಶುಕ್ರವಾರವಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಾವು 3 ವರ್ಷಗಳ ದೀರ್ಘ ಅವಧಿಗಾಗಿ ಕೋಚ್ ಹುಡುಕಾಟದಲ್ಲಿದ್ದೇವೆ ಎಂದು ಹೇಳಿದ್ದರು. ಜತೆಗೆ ದ್ರಾವಿಡ್ ಅವರಿಗೂ ಮರುಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದರು. ಆದರೆ, ದ್ರಾವಿಡ್ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ.
ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆಯ್ಕೆಯಾದ ಹೊಸ ಕೋಚ್ ವಿಶ್ವಕಪ್ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ. ದ್ರಾವಿಡ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಬಳಿಕವೇ ಕೋಚ್ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ಟಿ20 ವಿಶ್ವಕಪ್ ತನಕ ಅವರನ್ನು ಮುಂದುವರಿಯುವಂತೆ ಒತ್ತಾಯ ಮಾಡಿತ್ತು. ಹೀಗಾಗಿ ದ್ರಾವಿಡ್ ಟಿ20 ವಿಶ್ವಕಪ್ ತನಕ ಈ ಹುದ್ದೆಯಲ್ಲಿ ಮುಂದುವರಿದರು.
ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಹಲವು ಬಾರಿ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. 2022ರಲ್ಲಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಸರಣಿಗೆ ಲಕ್ಷ್ಮಣ್ ಕೋಚ್ ಆಗಿ ಕಾರ್ಯನಿರ್ವಹಿಸಿ ಯಶಸ್ಸು ಕಂಡಿದ್ದರು. ಇವರ ಮಾರ್ಗದರ್ಶನದಲ್ಲೇ ಅಂಡರ್ 19 ವಿಶ್ವ ಕಪ್ ಕೂಡ ಟೀಮ್ ಇಂಡಿಯಾ ಗೆದ್ದಿತ್ತು. ಹೀಗಾಗಿ ದ್ರಾವಿಡ್ ಬಳಿಕ ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಸೂಕ್ತ ಎಂದು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.
ಏಕದಿನ ವಿಶ್ವಕಪ್ ಸೋಲಿನ ಬಳಿಕ ಮಾಧ್ಯಮದವರ ಜತೆ ಮಾತನಾಡಿದ್ದ ರಾಹುಲ್ ದ್ರಾವಿಡ್, “ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಅಥವಾ ತೊರೆಯುವ ಕುರಿತು ಇನ್ನೂ ಯೋಚಿಸಿಲ್ಲ” ಎಂದು ಹೇಳಿದ್ದರು.