Site icon Vistara News

Rohit Sharma: ‘ಪಂತ್​ ಆಟ ನೋಡಬೇಕಿತ್ತು’: ಇಂಗ್ಲೆಂಡ್ ಆಟಗಾರನಿಗೆ ವಾರ್ನಿಂಗ್​ ಕೊಟ್ಟ ರೋಹಿತ್​

rohit sharma

ಧರ್ಮಶಾಲಾ: ಟೆಸ್ಟ್ ಕ್ರಿಕೆಟ್​ನಲ್ಲಿ ಆಕ್ರಮಣಕಾರಿಯಾಗಿ ಆಡುವ ಬಾಜ್​ ಬಾಲ್(Bazball) ಮಾದರಿಯನ್ನು ನೀಡಿ ಯಶಸ್ವಿ ಜೈಸ್ವಾಲ್(Yashasvi Jaiswal)​ ಬ್ಯಾಟಿಂಗ್​ ಕಲಿತರು ಎಂದು ಹೇಳಿದ್ದ ಇಂಗ್ಲೆಂಡ್​​ ತಂಡದ ಬ್ಯಾಟರ್​ ಬೆನ್​ ಡಕ್ಕೆಟ್(Ben Duckett)​ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ(Rohit Sharma) ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ಇಂಗ್ಲೆಂಡ್​ ವಿರುದ್ಧ ನಾಳೆ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಟೆಸ್ಟ್​ ಪಂದ್ಯದ ಭಾಗವಾಗಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್​, ‘ನನಗೆ ಈಗಲೂ ಬಾಜ್​ ಬಾಲ್​ ಕ್ರಿಕೆಟ್​ ಎಂದರೆ ಏನು ಎಂದು ಗೊತ್ತಿಲ್ಲ. ಆ ರೀತಿ ಆಕ್ರಮಣಕಾರಿ ಆಟ ಆಡುವವರನ್ನು ಕೂಡ ನಾನು ನೋಡಿಲ್ಲ. ನೈಜ ಟೆಸ್ಟ್​ ಆಡುವುದು ಮಾತ್ರ ನನಗೆ ತಿಳಿದಿದೆ. ಡಕೆಟ್​​ ಬಹುಶಃ ರಿಷಭ್​ ಪಂತ್(Rishabh Pant)​ ಆಟ ನೋಡಿಲ್ಲ ಎನಿಸುತ್ತೆ. ನಮ್ಮ ಟೀಮ್​​ನಲ್ಲಿ ಪಂತ್​ ಎಂಬ ಒಬ್ಬ ಆಟಗಾರನಿದ್ದ, ಅವನ ಆಟವನ್ನು ಡಕೆಟ್​ ನೋಡಬೇಕಿತ್ತು’ ಎಂದು ಹೇಳುವ ಮೂಲಕ ದರ್ಪದ ಮಾತುಗಳನ್ನಾಡಿದ ಬೆನ್​ ಡಕ್ಕೆಟ್​ಗೆ ತಿವಿದಿದ್ದಾರೆ.

ರೋಹಿತ್​ ಅವರು ಪಂತ್​ ಅವರನ್ನು ಉದಾಹರಣೆ ನೀಡಲೂ ಕೂಡ ಒಂದು ಕಾರಣವಿದೆ. ಪಂತ್​ ಯಾವುದೇ ಮಾದರಿಯ ಆಟದಲ್ಲಿಯೂ ಆಕ್ರಮಣಕಾರಿ ಬ್ಯಾಟಿಂಗ್​ಗೆ ಹೆಸರುವಾಸಿ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕವೇ ವಿದೇಶದಲ್ಲಿ ನಡೆದ ಹಲವು ಟೆಸ್ಟ್​ ಪಂದ್ಯಗಳಲ್ಲಿ ಭಾರತವನ್ನು ಗೆಲ್ಲಿಸಿದ ಕೀರ್ತಿ ಹೊಂದಿದ್ದಾರೆ. ಹೀಗಾಗಿ ಬಾಜ್​ ಬಾಲ್​ಗಿಂತಲೂ ಪಂತ್ ಅಪಾಯಕಾರಿ ಎಂದು ಹೇಳುವ ಮೂಲಕ ಬಾಜ್​ ಬಾಲ್ ಕುರಿತು ಜಂಬ ಕೊಚ್ಚಿಕೊಂಡ ಡಕೆಟ್​ಗೆ ರೋಹಿತ್​ ಮುಟ್ಟಿ ನೋಡುವ ಹಾಗೆ ಟಾಂಗ್​ ಕೊಟ್ಟಿದ್ದಾರೆ.

ಸರಣಿಯ ಬಗ್ಗೆ ಮಾತನಾಡಿದ ರೋಹಿತ್​, ‘ಪೈಪೋಟಿಯಿಂದ ಕೂಡಿದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯು ನನ್ನನ್ನು ಉತ್ತಮ ನಾಯಕನನ್ನಾಗಿ ರೂಪಿಸಿದೆ’ ಎಂದು ಅಭಿಪ್ರಾಯಪಟ್ಟರು. ‘ನಾಯಕನಾಗಿ ಇದು ನನ್ನ ಪಾಲಿಗೆ ಮಹತ್ವದ ಸರಣಿಯಾಗಿತ್ತು. ಏಕೆಂದರೆ ಅನುಭವಿ ಆಟಗಾರರು ಹೆಚ್ಚಾಗಿ ತಂಡದಲ್ಲಿ ಇರಲಿಲ್ಲ. ವಿಭಿನ್ನ ಸವಾಲುಗಳು ಎದುರಾಗಿತ್ತು. ಸಾಕಷ್ಟು ವಿಚಾರಗಳನ್ನು ಈ ಸರಣಿಯಿಂದ ಕಲಿತಿದ್ದೇನೆ’ ಎಂದರು.

‘ಒಬ್ಬ ನಾಯಕನಾಗಿ, ಆಟಗಾರರನ್ನು ಬಳಸಿಕೊಳ್ಳುವುದು ಹೇಗೆ ಮತ್ತು ಅದರಲ್ಲೂ ಒತ್ತಡದ ಸಂದರ್ಭಗಳು ಎದುರಾದಾಗ, ಪರಿಸ್ಥಿತಿಗೆ ತಕ್ಕಂತೆ ಪ್ರತಿಕ್ರಿಯಿಸುವುದು ಹೇಗೆ ಎಂಬುದನ್ನು ಕಲಿತಿದ್ದೇನೆ. ಈ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದಕ್ಕೆ ಸಂತಸವಿದೆ’ ಎಂದರು. ಭಾರತ ತಂಡವನ್ನು 15 ಪಂದ್ಯಗಳಲ್ಲಿ ಮುನ್ನಡೆಸಿರುವ ರೋಹಿತ್‌, 9 ಗೆಲುವು ತಂದುಕೊಟ್ಟಿದ್ದಾರೆ. 4 ಪಂದ್ಯಗಳಲ್ಲಿ ಸೋಲು ಎದುರಾಗಿದ್ದು, ಇನ್ನೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
.

Exit mobile version