Site icon Vistara News

U19 World Cup 2024: ಭಾರತಕ್ಕೆ ಫೈನಲ್​ನಲ್ಲಿ ಆಸ್ಟ್ರೇಲಿಯಾ ಎದುರಾಳಿ

IND vs AUS

ಬೆನೋನಿ: ಭಾನುವಾರ ನಡೆಯುವ ಐಸಿಸಿ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌(U19 World Cup 2024) ಪಂದ್ಯಾವಳಿಯ ಫೈನಲ್​ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್​ ಭಾರತ ತಂಡ ಆಸ್ಟ್ರೇಲಿಯಾದ(IND vs AUS) ಸವಾಲು ಎದುರಿಸಲಿದೆ. ಗುರುವಾರ ನಡೆದ ದ್ವಿತೀಯ ಸೆಮಿಫೈನಲ್‌ ರೋಚಕ ಸೆಣಸಾಟದಲ್ಲಿ ಆಸೀಸ್​ ತಂಡ ಪಾಕಿಸ್ತಾನ ವಿರುದ್ಧ 1 ವಿಕೆಟ್​ ರೋಚಕ ಜಯ ಸಾಧಿಸಿ ಫೈನಲ್​ಗೆ ಲಗ್ಗೆ ಇಟ್ಟಿತ್ತು.

ಕಳೆದ ವರ್ಷ ನಡೆದಿದ್ದ ಹಿರಿಯರ ಏಕದಿನ ಕ್ರಿಕೆಟ್​ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಮಣಿಸಿ 6ನೇ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ಕಿರಿಯರು ಆ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿದೆ(U19 World Cup 2024 final). ಸದ್ಯ ಭಾರತ ತಂಡದ ಪ್ರದರ್ಶನವನ್ನು ನೋಡುವಾಗ ಕಪ್​ ಗೆಲ್ಲುವ ವಿಶ್ವಾಸವಿದೆ. ಏಕೆಂದರೆ ಭಾರತದ ಪಾಳಯದಲ್ಲಿ ಸಮರ್ಥ ಆಟಗಾರರಿದ್ದಾರೆ. ಹೀಗಾಗಿ ನಿರೀಕ್ಷೆಯೊಂದನ್ನು ಮಾಡಬಹುದು.

ಮುಖಾಮುಖಿ


ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಇದುವರೆಗೆ 5 ಬಾರಿ ಮುಖಾಮುಖಿಯಾಗಿದೆ. ಎಲ್ಲ 5 ಪಂದ್ಯಗಳನ್ನು ಭಾರತ ಗೆದ್ದು ಬೀಗಿದೆ. ಇದರಲ್ಲಿ ಒಂದು ಫೈನಲ್​ ಪಂದ್ಯವಾಗಿದೆ. 2018ರಲ್ಲಿ ಭಾರತ ಮತ್ತು ಆಸೀಸ್​ ಫೈನಲ್ ಪಂದ್ಯದಲ್ಲಿ​ ಮುಖಾಮುಖಿಯಾಗಿತ್ತು. ಪೃಥ್ವಿ ಶಾ ನೇತೃತ್ವದ ಭಾರತ ತಂಡ ಈ ಪಂದ್ಯವನ್ನು 8 ವಿಕೆಟ್​ಗಳಿಂದ ಗೆದ್ದು ಪ್ರಶಸ್ತಿ ಎತ್ತಿ ಹಿಡಿದಿತ್ತು. ಭಾರತ ಪರ ಮಂಜೋತ್ ಕಾಲ್ರಾ ಫೈನಲ್​ ಪಂದ್ಯದಲ್ಲಿ ಅಜೇಯ 101 ರನ್​ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.

ದಿಟ್ಟ ಹೋರಾಟ ನಡೆಸಿದರೂ ಸೋಲು ಕಂಡ ಪಾಕ್​


ಗುರುವಾರ ನಡೆದ ದ್ವಿತೀಯ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ ಟಾಮ್ ಸ್ಟ್ರಾಕರ್ ಘಾತಕ ಬೌಲಿಂಗ್​ ದಾಳಿಗೆ ಸಿಲುಕಿ 48.5 ಓವರ್ ಗಳಲ್ಲಿ 179 ರನ್ ಗಳನ್ನಷ್ಟೇ ಗಳಿಸಿ ಆಲೌಟಾಯಿತು. ಟಾಮ್ ಸ್ಟ್ರಾಕರ್ 6 ವಿಕೆಟ್ ಕಬಳಿಸಿದರು. ಗುರಿ ಬೆನ್ನಟ್ಟಿದ ಆಸೀಸ್ 49.1 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಜಯ ಭೇರಿ ಬಾರಿಸಿತು. 164ಕ್ಕೆ 9 ನೇ ವಿಕೆಟ್ ಕಳೆದುಕೊಂಡಿದ್ದ ಆಸೀಸ್​ ಸೋಲು ಕಾಣಲಿದೆ ಎನ್ನುವಷ್ಟರಲ್ಲಿ ಕೊನೆಯ ವಿಕೆಟ್​ಗೆ ರಾಫ್ ಮ್ಯಾಕ್‌ ಮಿಲನ್ ಔಟಾಗದೆ 19 ರನ್ ಮತ್ತು ಕ್ಯಾಲಮ್ ವಿಡ್ಲರ್ 2 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

Exit mobile version