ಆಂಟಿಗುವಾ: ಇಂದು ನಡೆಯುವ ಟಿ20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲಿ (T20 World Cup 2024) ದಕ್ಷಿಣ ಆಫ್ರಿಕಾ(south africa) ಮತ್ತು ಅಮೆರಿಕ(United States) ಮುಖಾಮುಖಿಯಾಗಲಿವೆ. ಟೂರ್ನಿಯ ಮೊದಲ ಸೂಪರ್-8 ಪಂದ್ಯ ಇದಾಗಿದೆ. ಇದು ಇತ್ತಂಡಗಳ (USA vs SA) ನಡುವಣ ಮೊದಲ ಕ್ರಿಕೆಟ್ ಮುಖಾಮುಖಿಯೂ ಹೌದು.
ಎಚ್ಚರ ಅಗತ್ಯ
ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯ ಎನಿಸಿಕೊಂಡಿದ್ದರೂ ಕೂಡ ಅಮೆರಿಕವನ್ನು ಕಡೆಗಣಿಸುವಂತಿಲ್ಲ. ಬಲಿಷ್ಠ ಪಾಕಿಸ್ತಾನಕ್ಕೆ ನೀರು ಕುಡಿಸಿದ್ದು ಮತ್ತು ಭಾರತಕ್ಕೆ ತೀವ್ರ ಪೈಪೋಟಿ ನೀಡಿದ್ದನ್ನು ಮರೆಯುವಂತಿಲ್ಲ. ಅಮೆರಿಕ ಕ್ರಿಕೆಟ್ ಲೋಕಕ್ಕೆ ಹೊಸ ತಂಡವಾಗಿದ್ದರೂ ಕೂಡ ಆಟಗಾರರು ಮಾತ್ರ ಹೊಸಬರಲ್ಲ. ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್ ತಂಡದ ಪರ ಆಡಿ ಈಗ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಆಟಗಾರರಿಗೆ ಕ್ರಿಕೆಟ್ ಹೊಸತಲ್ಲ. ಎಲ್ಲರು ಉತ್ಕೃಷ್ಟ ಮಟ್ಟದ ಆಟವನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ.
ದಕ್ಷಿಣ ಆಫ್ರಿಕಾ ಆಡಿದ ಎಲ್ಲ ಲೀಗ್ ಪಂದ್ಯಗಳಲ್ಲಿಯೂ ಪ್ರಯಾಸದ ಗೆಲುವು ಸಾಧಿಸಿತ್ತು. ಒಮ್ಮೆಯೂ 120 ಗಡಿ ದಾಟಿರಲಿಲ್ಲ. ಹಾಗಂತ ದಕ್ಷಿಣ ಆಫ್ರಿಕಾಗೆ ದೊಡ್ಡ ಮೊತ್ತ ಬಾರಿಸುವ ಸಾಮರ್ಥ ಇಲ್ಲವೆಂದಲ್ಲ. ಅದು ಆಡಿದ ಪಿಚ್ ನ್ಯೂಯರ್ಕ್ನ ಅಪಾಯಕಾರಿ ನಾಸೌ ಕೌಂಟಿ ಸ್ಟೇಡಿಯಂನ ಪಿಚ್ನಲ್ಲಿ. ಇಲ್ಲಿ ಹರಣಿ ಪಡೆ ಮಾತ್ರವಲ್ಲ ಆಡಿದ ಎಲ್ಲ ತಂಡಗಳು ಕೂಡ 120ಕ್ಕಿಂತ ಅಧಿಕ ಮೊತ್ತವನ್ನು ಬಾರಿಸಿಲ್ಲ. ಪಾಕ್ ವಿರುದ್ಧ ಭಾರತ 119 ರನ್ ಬಾರಿಸಿದ್ದೇ ಗರಿಷ್ಠ ಮೊತ್ತ. ಇದೀಗ ಸೂಪರ್-8 ಪಂದ್ಯಗಳನ್ನು ವಿಂಡೀಸ್ನಲ್ಲಿ ಆಡುತ್ತಿರುವ ಕಾರಣ ಮಾರ್ಕ್ರಮ್ ಪಡೆ ದೊಡ್ಡ ಮೊತ್ತವನ್ನು ಪೇರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ T20 World Cup 2024: ಸೂಪರ್-8 ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ; ಅಭ್ಯಾಸದ ವೇಳೆ ಸ್ಟಾರ್ ಆಟಗಾರನಿಗೆ ಗಾಯ
ಲೀಗ್ ಹಂತದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಕ್ವಿಂಟನ್ ಡಿ ಕಾಕ್, ನಾಯಕ ಐಡೆನ್ ಮಾರ್ಕ್ರಮ್, ರೀಜಾ ಹೆಂಡ್ರಿಕ್ಸ್ ಸೂಪರ್-8 ಪಂದ್ಯದಲ್ಲಾದರೂ ನಿರೀಕ್ಷಿತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಮತ್ತು ಹೆನ್ರಿಚ್ ಕ್ಲಾಸೆನ್ ಸಿಡಿದು ನಿಂತು ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ರಬಾಡ, ಜಾನ್ಸೆನ್, ಮಹಾರಾಜ್, ನೋರ್ಜೆ ಅವರನ್ನೊಳಗೊಂಡ ಬೌಲಿಂಗ್ ವಿಭಾಗ ಘಾತಕವಾಗಿದೆ.
ಅಮೆರಿಕ ಪರ ಕನ್ನಡಿಗ ನಾಸ್ತುಷ್ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ಮೊನಾಂಕ್ ಪಟೇಲ್, ವಿಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾದ ಆರನ್ ಜೋನ್ಸ್ ಕೂಡ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ವಿಂಡೀಸ್ ಪಿಚ್ನಲ್ಲಿ ಆಡಿದ ಅನುಭವ ಅಷ್ಟಾಗಿ ಇರದ ಕಾರಣ ನಾಳಿನ ಪಂದ್ಯದಲ್ಲಿ ಹೇಗೆ ಪ್ರದರ್ಶನ ತೋರಬಹುದು ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.
ಸಂಭಾವ್ಯ ತಂಡ
ಅಮೆರಿಕ: ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೀ), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಆನ್ರಿಚ್ ನೋರ್ಜೆ, ಒಟ್ನೀಲ್ ಬಾರ್ಟ್‌ಮನ್.