Site icon Vistara News

Virat Kohli: ಕೊಹ್ಲಿ ಕ್ಲಾಸ್ ಪ್ಲೇಯರ್, ಫೈನಲ್​ನಲ್ಲಿ ಆಡುತ್ತಾರೆ ಎಂದು ಬೆಂಬಲ ಸೂಚಿಸಿದ ನಾಯಕ ರೋಹಿತ್​

Virat Kohli

Virat Kohli: Despite failing with the bat, Kohli receives steadfast backing from Rohit

ಪ್ರೊವಿಡೆನ್ಸ್‌: ಈ ಬಾರಿಯ ಐಪಿಎಲ್‌ನಲ್ಲಿ ರನ್‌ ಪ್ರವಾಹ ಹರಿಸಿದ ವಿರಾಟ್‌ ಕೊಹ್ಲಿ(Virat Kohli) ಅವರು ಹಾಲಿ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿನ್ನೂ(T20 World Cup 2024) ಗುಣಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ. ಸಹಜವಾಗಿಯೇ ಇದು ಅಗ್ರ ಕ್ರಮಾಂಕದ ಮೇಲೆ ಒತ್ತಡ ತರುತ್ತಿದೆ. ಇಂಗ್ಲೆಂಡ್​ ವಿರುದ್ಧದ ಸೆಮಿ ಫೈನಲ್​ ಪಂದ್ಯದಲ್ಲಿಯೂ ಕೊಹ್ಲಿ ಒಂದಂಕಿಗೆ ಸೀಮಿತರಾಗಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಆದರೆ, ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

ಪಂದ್ಯದ ಬಳಿಕ ವಿರಾಟ್​ ಕೊಹ್ಲಿಯ ಬ್ಯಾಟಿಂಗ್​ ವೈಫಲ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೋಹಿತ್​, ಖಂಡಿತವಾಗಿಯೂ ವಿರಾಟ್ ಓರ್ವ ಕ್ಲಾಸ್ ಪ್ಲೇಯರ್, ಅವರೊಬ್ಬ ಬಿಗ್ ಮ್ಯಾಚ್ ಪ್ಲೇಯರ್. ಪ್ರತಿಯೊಬ್ಬ ಆಟಗಾರನು ತನ್ನ ವೃತ್ತಿಜೀವನದಲ್ಲಿ ಏರಿಳಿತ ಕಾಣುವುದು ಸಹಜ. ಆದರೆ, ಕೊಹ್ಲಿ ವಿಷಯದಲ್ಲಿ ಫಾರ್ಮ್ ದೊಡ್ಡ ವಿಷಯವಲ್ಲ. ಅವರು ಫೈನಲ್‌ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ನನಗೆ ನಂಬಿಕೆ ಇದೆ ಫೈನಲ್​ನಲ್ಲಿ ಅವರು ಶ್ರೇಷ್ಠ ಬ್ಯಾಟಿಂಗ್​ ತೋರುವ ಮೂಲಕ ಎಲ್ಲ ಟೀಕೆಗಳಿಗೂ ಬ್ಯಾಟ್​ನಿಂದಲೇ ಉತ್ತರಿಸಲಿದ್ದಾರೆ ಎಂದು ಹೇಳುವ ಮೂಲಕ ಕೊಹ್ಲಿಗೆ ಬೆಂಬಲ ಸೂಚಿಸಿದರು.

ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ 9 ರನ್​ಗೆ ವಿಕೆಟ್​ ಕಳೆದುಕೊಂಡ ಕೊಹ್ಲಿ ಇದೇ ಬೇಸರದಲ್ಲಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಕುಳಿತು ತನ್ನ ಬ್ಯಾಟಿಂಗ್​ ಬಗ್ಗೆ ಚಿಂತಿಸಿ ಕಣ್ಣೀರು ಸುರಿಸಿದರು. ಈ ವೇಳೆ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಬಂದು ಕೊಹ್ಲಿಯನ್ನು ಸಂತೈಸಿದರು. ಈ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ Rohit Sharma: ಕೊಹ್ಲಿ, ಧೋನಿ ಬಳಿಕ ನಾಯಕನಾಗಿ ವಿಶೇಷ ದಾಖಲೆ ಬರೆದ ರೋಹಿತ್​

2014, 2016, 2022ರಲ್ಲಿ ಭಾರತ ಆಡಿದ ಎಲ್ಲ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅರ್ಥಶತಕ ಬಾರಿಸಿ ಮಿಂಚಿದ್ದರು. ಆದರೆ, ಈ ಬಾರಿ ಒಂದಂಕಿಗೆ ಸೀಮಿತರಾದರು. ಜತೆಗೆ ಈ ಬಾರಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕೊಹ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಂತಾಯಿತು. ಇಂಗ್ಲೆಂಡ್​ ವಿರುದ್ಧ 9 ಎಸೆತಗಳಲ್ಲಿ 9 ರನ್​ ಬಾರಿಸಿ ಟಾಪ್ಲಿ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಆಡಿದ 7 ಪಂದ್ಯಗಳ ಪೈಕಿ 2 ಪಂದ್ಯದಲ್ಲಿ ಶೂನ್ಯ ಸುತ್ತಿದ್ದಾರೆ. ಒಟ್ಟಾರೆ ಅವರ ಗಳಿಕೆ 75 ರನ್​.

ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದು ಕೂಡ ಅವರ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವಿರಬಹುದು. ಕೆಲ ವರ್ಷಗಳಿಂದ ಐಪಿಎಲ್​ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಿದ್ದರೂ ಕೂಡ ಐಸಿಸಿ ಟೂರ್ನಿಯಲ್ಲಿ ಇದುವರೆಗೂ ಆಡಿರಲಿಲ್ಲ. ಶೈನಿಂಗ್​ ಬಾಲ್​ನಲ್ಲಿ ಅವರಿಗೆ ಆಡಿದ ಅನುಭವ ಕೂಡ ಅಷ್ಟಾಗಿ ಇಲ್ಲ. ಏನಿದ್ದರೂ ಮಧ್ಯಮ ಕ್ರಮಾಂಕದಲ್ಲಿಯೇ ಅವರು ಹೆಚ್ಚು ಸಕ್ಸನ್​ ಕಂಡಿರುವುದು. ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಲ್ಲ ಎಂದು ಹೇಳಲಾಗಿತ್ತು. ಇದು ಕೂಡ ಅವರ ಬ್ಯಾಟಿಂಗ್​ ಹಿನ್ನಡೆಗೆ ಕಾಣವಾಗಿರಬಹುದು.

Exit mobile version