ಬೆಂಗಳೂರು: ವಿರಾಟ್ ಕೊಹ್ಲಿ (Virat Kohli) ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿರುವಂತಹ ವ್ಯಕ್ತಿ. ಆ ವ್ಯಕ್ತಿಗೂ ಸ್ಫೂರ್ತಿಯಾಗಿರುವವರಿದ್ದಾರೆ. ಅವರು ಮತ್ತಿನ್ಯಾರೂ ಅಲ್ಲ, ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ. 17 ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup 2024) ಗೆದ್ದ ಟೀಮ್ ಇಂಡಿಯಾಗೆ ಹಲವಾರು ಸೆಲೆಬ್ರಿಟಿಗಳು ಭಾರತೀಯ ಕ್ರಿಕೆಟ್ ತಂಡಕ್ಕೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು. ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಪತಿ-ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹೊಗಳಿ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ವಿರಾಟ್ ಕೊಹ್ಲಿ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾಗೆ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು ಅನುಷ್ಕಾ ಜತೆ ಇರುವ ಫೋಟೊ ಹಂಚಿಕೊಂಡು ಹೀಗೆ ಬರೆದುಕೊಂಡಿದ್ದಾರೆ. ʻʻನೀನಿಲ್ಲದೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ನನ್ನನ್ನು ವಿನಮ್ರವಾಗಿ ಇರಲು ಪ್ರಯತ್ನಿಸಿರುವೆ. ನಾನು ನಿಮಗಾಗಿ ಹೆಚ್ಚು ಕೃತಜ್ಞರಾಗಿರಲು ಸಾಧ್ಯವಿಲ್ಲ. ಈ ಗೆಲುವು ನನ್ನದಷ್ಟೇ ನಿನ್ನದು ಕೂಡ. ಧನ್ಯವಾದಗಳು ಮತ್ತು ನಾನು ನಿನ್ನನ್ನು ತುಂಬ ಪ್ರೀತಿಸುತ್ತೇನೆ ʼʼಎಂದು ಬರೆದುಕೊಂಡಿದ್ದಾರೆ.
ನಿನ್ನೆಯಷ್ಟೇ ಅನುಷ್ಕಾ ಶರ್ಮಾ ಅವರು ಪೋಸ್ಟ್‌ನಲ್ಲಿ ʻʻನಮ್ಮ ಮಗಳ ದೊಡ್ಡ ಕಾಳಜಿ ಏನೆಂದರೆ, ಎಲ್ಲಾ ಆಟಗಾರರು ಟಿವಿಯಲ್ಲಿ ಅಳುತ್ತಿರುವುದನ್ನು ನೋಡಿದ ನಂತರ ಅವರನ್ನು ತಬ್ಬಿಕೊಳ್ಳಲು ಯಾರಾದರೂ ಇದ್ದರೆ ಎಂದು. ಆಗ ನಾನು ಅಂದೆ ..ಹೌದು, ಅವರನ್ನು 1.5 ಬಿಲಿಯನ್ ಜನರು ತಬ್ಬಿಕೊಂಡರು ಎಂದೆ. ಎಂತಹ ಅದ್ಭುತ ಗೆಲುವು ಮತ್ತು ಎಂತಹ ಪೌರಾಣಿಕ ಸಾಧನೆ!! ಚಾಂಪಿಯನ್ಸ್ – ಅಭಿನಂದನೆಗಳು!! ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: Virat kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಕೊಹ್ಲಿ, ರೋಹಿತ್ ದಾಖಲೆಗಳ ಕಂಪ್ಲೀಟ್ ಡಿಟೇಲ್ಸ್!
ಮತ್ತೊಂದು ಪೋಸ್ಟ್‌ನಲ್ಲಿ, ಅನುಷ್ಕಾ ಅವರು ವಿರಾಟ್ ಮುಗುಳ್ನಕ್ಕು ಟ್ರೋಫಿಯನ್ನು ಎತ್ತುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದರು.
ರೋಚಕ ಪಂದ್ಯ ಗೆದ್ದ ಭಾರತ
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೆಯ ಓವರ್ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್ ಮಿಲ್ಲರ್ ವಿಕೆಟ್ ಕೈಚೆಲ್ಲಿದರು. ಎರಡನೇ ಎಸೆತವನ್ನು ರಬಾಡಾ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಹಾರ್ದಿಕ್ ಒಂದು ವೈಡ್ ಎಸೆದರು. ರಬಾಡಾ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಮಾತ್ರ ಬಂತು. ಭಾರತ 7 ರನ್ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದು ಬೀಗಿತು.