Site icon Vistara News

Virat Kohli: ಟೀಕೆಗಳಿಗೆ ಬಹಿರಂಗವಾಗಿಯೇ ತಿರುಗೇಟು ನೀಡಿದ ಕಿಂಗ್​ ಕೊಹ್ಲಿ​

Virat Kohli

ಅಹಮದಾಬಾದ್​: ಭಾನುವಾರ ನಡೆದ ಐಪಿಎಲ್​ನ ಡಬಲ್​ ಹೆಡರ್​ನ ಹಗಲು ಪಂದ್ಯದಲ್ಲಿ ಬೊಂಬಾಟ್​ ಬ್ಯಾಟಿಂಗ್​ ನಡೆಸಿ ಅಜೇಯ ಅರ್ಧಶತಕ ಬಾರಿಸಿದ ಆರ್​ಸಿಬಿ(Royal Challengers Bengaluru) ಆಟಗಾರ ವಿರಾಟ್​ ಕೊಹ್ಲಿ(Virat Kohli) ಹಲವು ದಾಖಲೆಗಳನ್ನು ಬರೆದಿದ್ದಾರೆ. ಜತೆಗೆ ತಮ್ಮ ಬ್ಯಾಟಿಂಗ್​ ಬಗ್ಗೆ ಟೀಕೆ ಮಾಡಿದ ಎಲ್ಲರಿಗೂ ತೀಕ್ಷವಾದ ಮಾತುಗಳಿಂದ ಬಹಿರಂಗವಾಗಿಯೇ ತಿರುಗೇಟು ನೀಡಿದ್ದಾರೆ.

ವಿರಾಟ್​ ಕೊಹ್ಲಿ ಅವರು ಈ ಬಾರಿಯ ಐಪಿಎಲ್​ನಲ್ಲಿ ಅತ್ಯಧಿಕ ರನ್​ ಕಲೆ ಹಾಕಿದರೂ ಕೂಡ ಅವರ ಬ್ಯಾಟಿಂಗ್​ ನಿಧಾನಗತಿಯಿಂದ ಕೂಡಿತ್ತು. ಇದೇ ಕಾರಣಕ್ಕೆ ಸುನೀಲ್​ ಗಾವಾಸ್ಕರ್​, ಆಕಾಶ್​ ಚೋಫ್ರಾ ಸೇರಿ ಅನೇಕ ಮಾಜಿ ಆಟಗಾರರು ಕೊಹ್ಲಿಯನ್ನು ಟೀಕಿಸಿದ್ದರು. ಕೊಹ್ಲಿಯ ಈ ಆಮೆಗತಿಯ ಬ್ಯಾಟಿಂಗ್​ನಿಂದಾಗಿಯೇ ಆರ್​ಸಿಬಿ ಸೋಲು ಕಾಣುತ್ತಿದೆ ಎಂದು ಹೇಳಿದ್ದರು.

ಕಳೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸ್ಪಿನ್ನ್​ ಬೌಲಿಂಗ್​ ದಾಳಿ ಎದುರಿಸಲು ಸಂಪೂರ್ಣವಾಗಿ ಪರದಾಟ ನಡೆಸಿದ್ದರು. ಹೀಗಾಗಿ ಸ್ಪಿನ್​ ಬೌಲಿಂಗ್​ಗೆ ಕೊಹ್ಲಿಗೆ ಆಡಲು ಬರುವುದಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು. ಇಂದಿನ ಪಂದ್ಯದಲ್ಲಿ ಬೊಂಬಾಟ್​ ಬ್ಯಾಟಿಂಗ್​ ನಡೆಸಿದ ಕೊಹ್ಲಿ ಕೇವಲ 32 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿ ಒಟ್ಟು 44 ಎಸೆತಗಳಿಂದ ಅಜೇಯ 70 ರನ್​ ಬಾರಿಸಿ ಮಿಂಚಿದರು. ಪಂದ್ಯದ ಮುಕ್ತಾಯದ ಬಳಿಕ ಮಾತನಾಡುವ ವೇಳೆ ತನ್ನ ವಿರುದ್ಧ ಯಾರೆಲ್ಲ ಟೀಕೆ ಮಾಡಿದ್ದಾರೋ ಅವರಿಗೆಲ್ಲ ಮುಟ್ಟಿ ನೋಡುವಂತೆ ತಕ್ಕ ಉತ್ತರ ನೀಡಿದ್ದಾರೆ.

ದಾಖಲೆ ಬರೆದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಈ ಆವೃತ್ತಿಯಲ್ಲಿ 500 ರನ್​ಗಳ ಗಡಿ ದಾಟುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತ್ಯಧಿಕ ಬಾರಿ 500 ರನ್ ಗಡಿ ದಾಡಿದ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಅವರ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ಕೂಡ 7 ಬಾರಿ ಈ ಸಾಧನೆ ಮಾಡಿದ್ದಾರೆ. ಗುಜರಾತ್​ ವಿರುದ್ಧ ಕೊಹ್ಲಿ ಬಾರಿಸಿದ ಮೂರನೇ ಅರ್ಧಶತಕ ಇದಾಗಿದೆ. ಒಂದು ಶತಕ ಕೂಡ ಒಳಗೊಂಡಿದೆ.

ಇದನ್ನೂ ಓದಿ IPL 2024: 41ನೇ ವಯಸ್ಸಿನಲ್ಲೂ ದಾಖಲೆ ಬರೆದ ಅಮಿತ್ ಮಿಶ್ರಾ

ಪಂದ್ಯ ಗೆದ್ದ ಆರ್​ಸಿಬಿ


ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್​ ಟೈಟಾನ್ಸ್​ ಸಾಯಿ ಸುದರ್ಶನ್​(84*) ಮತ್ತು ಶಾರೂಖ್​ ಖಾನ್​(58) ಅರ್ಧಶತಕದ ಉಪಯುಕ್ತ ಬ್ಯಾಟಿಂಗ್​ ನೆರವಿನಿಂದ 20 ಓವರ್​ಗೆ 3 ವಿಕೆಟ್​ ಕಳೆದುಕೊಂಡು ಭರ್ತಿ 200 ರನ್​ ಪೇರಿಸಿತು. ಜವಾಬಿತ್ತ ಆರ್​ಸಿಬಿ ಫುಲ್​ ಬ್ಯಾಟಿಂಗ್​ ಜೋಶ್​ನೊಂದಿಗೆ ಕೇವಲ 16 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ 206 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ವಿಲ್​ ಜಾಕ್ಸ್​ 41 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್​ ಮತ್ತು 5 ಬೌಂಡರಿ ಬಾರಿಸಿ ಭರ್ತಿ 100 ರನ್​ ಪೇರಿಸಿದರು. ಈ ಮೂಲಕ ಐಪಿಎಲ್​ನಲ್ಲಿ ಚೊಚ್ಚಲ ಶತಕ ಪೂರ್ತಿಗೊಳಿಸಿದರು.

Exit mobile version