ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮಂಗಳವಾರ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024)ನ ಪಂದ್ಯ ಅಪರೂಪದ ದಾಖಲೆಗೆ ಪಾತ್ರವಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಈ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ತಂಡದ ಆಟಗಾರ್ತಿ, ಸೌತ್ ಆಫ್ರಿಕಾದ ವೇಗದ ಬೌಲರ್ ಶಬ್ನಿಮ್ ಇಸ್ಮಾಯಿಲ್ (Shabnim Ismail) ಮಹಿಳಾ ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಬೌಲಿಂಗ್ ಮಾಡಿದ (Fastest delivery in women’s cricket) ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಶಬ್ನಿಮ್ ಬರೋಬ್ಬರಿ 132.1 Kmph (82.08 mph) ವೇಗದಲ್ಲಿ ಚೆಂಡೆ ಎಸೆದು ಈ ದಾಖಲೆ ನಿರ್ಮಿಸಿದ್ದಾರೆ.
ಶಬ್ನಿಮ್ ಇಸ್ಮಾಯಿಲ್ ಅವರು ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಈ ಮೈಲಿಗಲ್ಲು ನೆಟ್ಟಿದ್ದಾರೆ. ಈ ಮೂಲಕ ಅವರು ಮಹಿಳಾ ಕ್ರಿಕೆಟ್ನಲ್ಲಿ 130+ Kmph ವೇಗದಲ್ಲಿ ಚೆಂಡೆಸೆದ ಮೊದಲ ಬೌಲರ್ ಹಾಗೂ ಅತೀ ವೇಗವಾಗಿ ಬೌಲಿಂಗ್ ಮಾಡಿದ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದ್ದಾರೆ.
A historic day as Shabnim Ismail delivers the fastest delivery ever recorded in women's cricket 🤯
— ICC (@ICC) March 6, 2024
Details 👇https://t.co/l6AWuDcSyt
ಹಿಂದೆಯೂ ದಾಖಲೆ ಶಬ್ನಿಮ್ ಹೆಸರಿನಲ್ಲಿತ್ತು
ಇದಕ್ಕೂ ಮುನ್ನ ಈ ದಾಖಲೆ ಶಬ್ನಿಮ್ ಇಸ್ಮಾಯಿಲ್ ಅವರ ಹೆಸರಿನಲ್ಲಿಯೇ ಇತ್ತು ಎನ್ನುವುದು ಕೂಡ ವಿಶೇಷ. 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶಬ್ನಿಮ್ 128 kph ವೇಗದಲ್ಲಿ ಚೆಂಡೆಸೆದು ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಶಬ್ನಿಮ್ ಇಸ್ಮಾಯಿಲ್ ಅವರ ಈ ದಾಖಲೆಯ ಹೊರತಾಗಿಯು ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ವಿರುದ್ಧ ಸೋಲೋಪ್ಪಿಕೊಂಡಿತ್ತು.
ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್
ತವರಿನ ಉದ್ಘಾಟನಾ ಪಂದ್ಯದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವಿನ ಶುಭಾರಂಭ ಕಂಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 29 ರನ್ಗಳ ಗೆಲುವಿನ ನಗೆ ಬೀರಿದೆ. ಮೆಗ್ ಲ್ಯಾನಿಂಗ್ (53), ಜೆಮಿಮಾ ರೋಡ್ರಿಗಸ್ (69*) ಅವರ ಅರ್ಧಶತಕ ಹಾಗೂ ಜೆಸ್ ಜೊನಾಸೆನ್ (3 ವಿಕೆಟ್) ಅವರ ಬೌಲಿಂಗ್ ಪರಾಕ್ರಮದಿಂದ ಡೆಲ್ಲಿ ಗೆಲುವಿನ ನಗೆ ಬೀರಿತು.
12ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ನಿಗದಿತ 20 ಓವರ್ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 192 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಕಂಡು ಬೆಚ್ಚಿಬಿದ್ದ ಮುಂಬೈ ಇಂಡಿಯನ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ತನ್ನ ಪಾಲಿನ ಆಟದಲ್ಲಿ 8 ವಿಕೆಟ್ಗೆ 163 ರನ್ ಗಳಿಸಿ ಹೀನಾಯ ಸೋಲು ಕಂಡಿತು.
ಇದನ್ನೂ ಓದಿ: WPL 2024: ಮುಂಬೈ ವಿರುದ್ಧ ತವರಿನಲ್ಲಿ ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್
ಮಂಗಳವಾರ ನಡೆದ ಈ ಪಂದ್ಯದಲ್ಲಿನ ಮುಂಬೈ ಸೋಲಿನ ಲಾಭ ಆರ್ಸಿಬಿಗೆ ಲಭಿಸಿದೆ. ಮುಂಬೈ ತಂಡದ ರನ್ರೇಟ್ ಕುಸಿತದಿಂದ ಆರ್ಸಿಬಿ 3ನೇ ಸ್ಥಾನದಿಂದ 2ನೇ ಸ್ಥಾನಕ್ಕೇರಿದೆ. ಡೆಲ್ಲಿ ತಂಡ ಈ ಮೊದಲು ಅಗ್ರಸ್ಥಾನದಲ್ಲೇ ಕಾಣಿಸಿಕೊಂಡಿತ್ತು. ಇದೀಗ ಈ ಗೆಲುವಿನೊಂದಿಗೆ 8 ಅಂಕ ಸಂಪಾದಿಸಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಜತೆಗೆ ರನ್ ರೇಟ್ ಕೂಡ ಉತ್ತಮಪಡಿಸಿಕೊಂಡಿದೆ. ಮುಂಬೈ ಸೋತರೆ ಆರ್ಸಿಬಿ 2ನೇ ಸ್ಥಾನಕ್ಕೇರುವುದು ಖಚಿತವಾಗಿತ್ತು. ಏಕೆಂದರೆ ಉಭಯ ತಂಡಗಳಿಗೆ 6 ಅಂಕ ಪಡೆದಿತ್ತು. ಜತೆಗೆ ಮುಂಬೈ ದೊಡ್ಡ ರನ್ ರೇಟ್ ಕೂಡ ಹೊಂದಿರಲಿಲ್ಲ. ಹೀಗಾಗಿ ಈ ಲಾಭ ಆರ್ಸಿಬಿ ಒಲಿದಿದೆ. ಯುಪಿ ತಂಡ ಈ ಹಿಂದಿನಂತೆ 4ನೇ ಸ್ಥಾನದಲ್ಲೇ ಮುಂದುವರಿದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ