ನವದೆಹಲಿ: ಪ್ರಸಕ್ತ ಸಾಲಿನ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ 14 ಪಂದ್ಯಗಳು ಮುಕ್ತಾಯ ಕಂಡಿದ್ದು ಇನ್ನು ಕೇವಲ 6 ಲೀಗ್ ಪಂದ್ಯಗಳು ಮಾತ್ರ ಬಾಕಿ ಉಳಿದಿದೆ. ಸದ್ಯ ಅಂಕಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎನ್ನುವ ಮಾಹಿತಿ ಇಂತಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ (UP Warriorz) ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 42 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ರನ್‌ರೇಟ್ ಆಧಾರದ ಮೇಲೆ ಮುಂಬೈ ಇಂಡಿಯನ್ಸ್ ತಂಡವು ಎರಡನೇ ಸ್ಥಾನಕ್ಕೆ ಜಿಗಿದರೆ, ಆರ್‌ಸಿಬಿ ವುಮೆನ್ ತಂಡವು ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಯುಪಿ ವಾರಿಯರ್ಸ್ ತಂಡ ಈ ಹಿಂದಿನಂತೆ 4ನೇ ಸ್ಥಾನ, ಗುಜರಾತ್ ಜೈಂಟ್ಸ್ 5ನೇ ಸ್ಥಾನದಲ್ಲಿಯೇ ಮುಂದುವರಿದಿದೆ.
ಇಂದು ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ಮುಖಾಮುಖಿಯಾಗಲಿದೆ. ಡೆಲ್ಲಿ ಸೋತರೂ ಗೆದ್ದತರೂ ಮೊದಲ ಸ್ಥಾನದಲ್ಲೇ ಕಾಣಿಸಿಕೊಳ್ಳಲಿದೆ. ಒಂದೊಮ್ಮೆ ಸೋತೂ ಕೂಡ ರನ್ ರೇಟ್ನಲ್ಲಿ ಭಾರೀ ಕುಸಿತ ಆಗದು.
ನೂತನ ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಡೆಲ್ಲಿ ಕ್ಯಾಪಿಟಲ್ಸ್ | 5 | 4 | 1 | 8 (+1.301) |
ಮುಂಬೈ ಇಂಡಿಯನ್ಸ್ | 6 | 4 | 2 | 8 (+0.375) |
ಆರ್‌ಸಿಬಿ | 6 | 3 | 3 | 6 (+0.038) |
ಯುಪಿ ವಾರಿಯರ್ಸ್ | 6 | 2 | 4 | 4 (-0.435) |
ಗುಜರಾತ್ ಜೈಂಟ್ಸ್ | 5 | 1 | 4 | 0 (-1.278) |
ಗುರುವಾರ ನಡೆದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಬಳಗ ನೀಡಿದ 161 ರನ್‌ಗಳ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 118 ರನ್ ಗಳಿಸಲಷ್ಟೇ ಶಕ್ತವಾಯಿತು. ಯುಪಿ ವಾರಿಯರ್ಸ್ ತಂಡದ ಆಟಗಾರ್ತಿಯರು ರನ್ ಗಳಿಸಲು ಪರದಾಡಿದರು. ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತ ಹೋದ ಯುಪಿಡಬ್ಲ್ಯೂ ಕೊನೆಗೆ ಸೋಲೊಪ್ಪಿಕೊಂಡಿತು. ಯುಪಿ ಪರ ದೀಪ್ತಿ ಶರ್ಮಾ 53 ರನ್ ಬಾರಿಸಿದ್ದು ಬಿಟ್ಟರೆ ಬೇರೆ ಯಾವ ಆಟಗಾರ್ತಿಯೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ರನ್ ಗಳಿಸಲೇ ಇಲ್ಲ.
ಮುಂಬೈ ಇಂಡಿಯನ್ಸ್ ಪರ ಸೈಕಾ ಇಶಾಕ್ 27 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ನ್ಯಾಟ್ ಸ್ಕಿವರ್ ಬ್ರಂಟ್ 14 ರನ್ ನೀಡಿ 2 ವಿಕೆಟ್ ಪಡೆದರು. ಉತ್ತರ ಪ್ರದೇಶ ವಾರಿಯರ್ಸ್ ತಂಡವು ಈ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿಯೇ ಮುಂದುವರಿದಿದೆ. 6 ಪಂದ್ಯ ಆಡಿರುವ ಯುಪಿ 4 ಪಂದ್ಯಗಳಲ್ಲಿ ಸೋತು, 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ.