Site icon Vistara News

Prithvi Shaw : ಯೂಟ್ಯೂಬರ್​ ಸಪ್ನಾ ಗಿಲ್​​ಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಪೃಥ್ವಿ ಶಾ ನಿರಾಳ

Sapna Gill

#image_title

ಮುಂಬಯಿ : ಮಹಾನಗರ ಮುಂಬಯಿಯ ಉಪನಗರ ಅಂಧೇರಿಯ ಪಬ್​ ಒಂದರಲ್ಲಿ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ (Prithvi Shaw) ತನಗೆ ಕಿರುಕುಳ ನೀಡಿದ್ದಾರೆ ಎಂಬ ಸೋಶಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​​ ಸಪ್ನಾ ಗಿಲ್ (Sapna Gill) ನೀಡಿರುವ ದೂರು ಸುಳ್ಳು ಮತ್ತು ಆಧಾರರಹಿತ ಎಂದು ಮುಂಬಯಿ ಪೊಲೀಸರು (Mumbai Police) ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಮೂಲಕ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ್ದಾರೆಂಬ ವಿವಾದಕ್ಕೆ ಒಳಗಾಗಿದ್ದ ಪೃಥ್ವಿ ನಿರಾಳರಾಗಿದ್ದಾರೆ.

ತನಿಖಾಧಿಕಾರಿ ಸೋಮವಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ತಮ್ಮ ವರದಿಯನ್ನು ಸಲ್ಲಿಸಿದರು. ಪೊಲೀಸರು ವರದಿಯನ್ನು ಸಲ್ಲಿಸಿದ ನಂತರ, ಗಿಲ್ ಪರ ವಕೀಲ ಅಲಿ ಕಾಶಿಫ್ ಖಾನ್ ಅವರು ಗಿಲ್ ಅವರ ಸ್ನೇಹಿತ ತನ್ನ ಫೋನ್​​ನಲ್ಲಿ ರೆಕಾರ್ಡ್ ಮಾಡಿದ ಜಗಳದ ವೀಡಿಯೊ ತುಣುಕನ್ನು ಪ್ರದರ್ಶಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ವಿನಂತಿಸಿದರು. ಪಬ್ ಹೊರಗೆ ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನೂ ಕೋರ್ಟ್​ಗೆ ಸಲ್ಲಿಸುವಂತೆ ಅವರು ಕೋರಿದರು. ಘಟನೆಯ ವಿಡಿಯೊ ತುಣುಕನ್ನು ಸಲ್ಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿ ಜೂನ್ 28ಕ್ಕೆ ವಿಚಾರಣೆ ಮುಂದೂಡಲಾಯಿತು.

ಫೆಬ್ರವರಿಯಲ್ಲಿ ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ಯಾದವ್ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 509 (ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶದ ಮಾತು, ಸನ್ನೆ ಅಥವಾ ಕೃತ್ಯ) ಮತ್ತು 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಸಪ್ನಾ ಗಿಲ್ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಕೋರ್ಟ್​ಗೆ ಮನವಿ ಮಾಡುವ ಮೊದಲು, ಸಪ್ನಾ ಗಿಲ್ ಅಂಧೇರಿಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಕ್ರಿಕೆಟಿಗ ಮತ್ತು ಅವರ ಸ್ನೇಹಿತನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದರು. ಪಬ್​​ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದ ಪೊಲೀಸರೂ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತ ಶೋಬಿತ್ ಠಾಕೂರ್ ಕುಡಿದು ನೃತ್ಯ ಮಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : IPL 2023: ಪೃಥ್ವಿ ಶಾಗೆ ಇನ್ನಷ್ಟು ಅವಕಾಶ ಕೊಡುತ್ತೇವೆ: ಶೇನ್​ ವ್ಯಾಟ್ಸನ್

ಠಾಕೂರ್ ತನ್ನ ಮೊಬೈಲ್ ಫೋನ್​ ಮೂಲಕ ಪೃಥ್ವಿ ಅವರನ್ನು ರೆಕಾರ್ಡ್ ಮಾಡುತ್ತಿದ್ದರು. ಕ್ರಿಕೆಟಿಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಂತೆಯೇ ಆತನ ಫೋನ್​ನಲ್ಲಿ ರೆಕಾರ್ಡ್​ ಆಗಿರುವ ವಿಡಿಯೊಗಳನ್ನು ಪರಿಶೀಲಿಸಿದಾಗ, ಶಾ ಮತ್ತು ಇತರರು ಗಿಲ್ಗೆ ರೀತಿಯಲ್ಲಿ ಕಿರುಕುಳ ನೀಡಿದ್ದಾರೆ ಎಂದು ತೋರುವುದಿಲ್ಲ ಎಂದು ಪೊಲೀಸರು ಕೋರ್ಟ್​ಗೆ ವರದಿ ನೀಡಿದ್ದಾರೆ. ಘಟನೆ ನಡೆದ ಪಬ್​ನಲ್ಲಿ ಹಾಜರಿದ್ದ ಸಾಕ್ಷಿಗಳ ಹೇಳಿಕೆಗಳನ್ನೂ ದಾಖಲಿಸಿದ್ದೇವೆ. ಸಪ್ನಾ ಗಿಲ್ ಅವರನ್ನು ಯಾರೂ ಅನುಚಿತವಾಗಿ ಮುಟ್ಟಿಲ್ಲ ಎಂದು ಅವರೆಲ್ಲರೂ ಹೇಳಿದ್ದಾರೆ ಎಂದು ಪೊಲೀಸರು ಕೋರ್ಟ್​ಗೆ ತಿಳಿಸಿದ್ದಾರೆ.

ಪಬ್​ನ ಹತ್ತಿರದಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಟವರ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪೊಲೀಸರು ಪರಿಶೀಲಿಸಿದ್ದಾರೆ. ಅದರಲ್ಲಿ ಸಪ್ನಾ ಗಿಲ್​ ಅವರು ಪೃಥ್ವಿ ಶಾ ಅವರ ಕಾರನ್ನು ಬೇಸ್​ಬಾಲ್​ ಬ್ಯಾಟ್​ ಹಿಡಿದು ಹಿಂಬಾಲಿಸುತ್ತಿರುವುದು ಕಂಡುಬಂದಿದೆ. ಬಳಿಕ ಕ್ರಿಕೆಟಿಗನ ಕಾರಿನ ವಿಂಡ್​ಶೀಲ್ಡ್​ ಪುಡಿಪುಡಿ ಮಾಡಿದ್ದಾಳೆ ಎಂದು ಪೊಲೀಸರು ವರದಿ ನೀಡಿದ್ದಾರೆ.

ಪೊಲೀಸರು ಸಿಐಎಸ್ಎಫ್ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಗಿಲ್ ದೂರಿಂತೆ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಹೇಳಿದ್ದಾರೆ. ಪಬ್​ನಲ್ಲಿ ನಡೆದ ಜಗಳದ ಬಗ್ಗೆ ಅವರಿಗೆ ಸೂಚನೆ ಬಂದಿತ್ತು. ಅವರು ಸ್ಥಳ ತಲುಪಿದಾಗ ಕಾರಿನ ವಿಂಡ್​ಶೀಲ್ಡ್​ ಒಡೆಯಲಾಗಿತ್ತು. ಪಬ್​ನ ಒಳಗಡೆ ಗಲಾಟೆ ನಡೆಯುತ್ತಿತ್ತು. ಮ್ಯಾನೇಜರ್ ಅವರನ್ನು ಹೊರಹೋಗುವಂತೆ ಹೇಳಿದ್ದರು.

ಮಹಿಳೆಯೊಬ್ಬಳು ತನ್ನ ಕೈಯಲ್ಲಿ ಬೇಸ್ ಬಾಲ್ ಬ್ಯಾಟ್ ಹಿಡಿದಿರುವುದನ್ನು ಪೊಲೀಸ್​ ಅಧಿಕಾರಿ ನೋಡಿದ್ದರು. ಅವರು ಸ್ಥಳಕ್ಕೆ ಬರುತ್ತಿರುವುದನ್ನು ನೋಡಿದ ಆಕೆಯ ಸ್ನೇಹಿತ ಅವಳಿಂದ ಬ್ಯಾಟ್ ತೆಗೆದುಕೊಂಡು ಬದಿಗೆ ಎಸೆದಿದ್ದ. ಈ ವೇಳೆ ಯಾವುದೇ ಪುರುಷರು ಮಹಿಳೆಯ ಮೇಲೆ ಹಲ್ಲೆ ನಡೆದಿಲ್ಲ ಸಿಐಎಸ್ಎಫ್ ಅಧಿಕಾರಿಯೂ ಹೇಳಿಕೆ ನೀಡಿದ್ದಾರೆ.

ಉಪನಗರ ಹೋಟೆಲ್​​ನಲ್ಲಿ ಸೆಲ್ಫಿ ಕ್ಲಿಕ್ಕಿಸುವ ವಿಚಾರವಾಗಿ ನಡೆದ ಗಲಾಟೆ ವೇಳೆ ಪೃಥವಿ ಶಾ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಗಿಲ್ ಮತ್ತು ಇತರರನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಜಾಮೀನು ಪಡೆದ ನಂತರ ಗಿಲ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಪೊಲೀಸರು ಕ್ರಿಕೆಟಿಗನ ವಿರುದ್ಧ ಪ್ರಕರಣ ದಾಖಲಿಸದ ಕಾರಣ ಅವಳು ನಂತರ ನ್ಯಾಯಾಲಯದ ಮೊರೆ ಹೋಗಿದ್ದರು.

Exit mobile version