ನವದೆಹಲಿ: ದೇಶೀಯ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ನೀಡಿದ ಹೊರತಾಗಿಯೂ ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತನಾಗಿರುವ ಮುಂಬೈಯ ಸ್ಫೋಟಕ ಬ್ಯಾಟರ್ ಸರ್ಫರಾಜ್ ಖಾನ್(Sarfaraz Khan) ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕಾಶ್ಮೀರದ ಚೆಲುವೆಯನ್ನು ವರಿಸಿದ್ದಾರೆ. ಅವರ ಮದುವೆಯ ಫೋಟೊಗಳು ಇದೀಗ ವೈರಲ್ ಆಗಿದೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಶಾಹಿಸ್ತಾ ಖಾನ್ ಅವರನ್ನು ಸರ್ಫರಾಜ್ ಖಾನ್ ವಿವಾಹವಾಗಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿರಿಸಿದ ಈ ಜೋಡಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶುಭ ಹಾರೈಸಿದೆ. ವೆಸ್ಟ್ ಇಂಡೀಸ್ ಸರಣಿಗೆ ಸರ್ಫರಾಜ್ ಅವರನ್ನು ಕಡೆಗಣಿಸಿದ ವಿಚಾರವಾಗಿ ಬಿಸಿಸಿಐ ವಿರುದ್ಧ ಹಲವು ಮಾಜಿ ಆಟಗಾರರು ಅಸಮಾದಾನ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಬಿಸಿಸಿಐ ತಕ್ಕ ಉತ್ತರವನ್ನು ನೀಡಿತ್ತು. ಫಿಟ್ ನೆಸ್ ಸಮಸ್ಯೆ ಮತ್ತು ಮೈದಾನದ ಹೊರಗಿನ ವರ್ತನೆಯ ಕಾರಣದಿಂದಲೇ ಆಯ್ಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಇದನ್ನೂ ಓದಿ Sarfaraz Khan: ಸರ್ಫರಾಜ್ ಖಾನ್ ಆಯ್ಕೆ ವಿಚಾರದಲ್ಲಿ ಮಹತ್ವದ ಹೇಳಿಕೆ ನೀಡಿದ ಬಿಸಿಸಿಐ
ಮುಂಬೈನ ಬ್ಯಾಟರ್ ಆಗಿರುವ ಸರ್ಫರಾಜ್ ಖಾನ್, ಕಳೆದ ಮೂರು ರಣಜಿ ಋತುಗಳಲ್ಲಿ 2566 ರನ್ ಗಳಿಸಿದ್ದಾರೆ. ಅಂದರೆ, 2019-20ರಲ್ಲಿ 928, 2021-22ರಲ್ಲಿ 982 ರನ್ ಮತ್ತು 2022-23ರಲ್ಲಿ 656 ರನ್ ಗಳಿಸಿದ್ದಾರೆ. 25 ವರ್ಷದ ಈ ಆಟಗಾರ, ಸದ್ಯ 79.65 ಆವರೇಜ್ ಹೊಂದಿದ್ದಾರೆ. ಫಿಟ್‌ನೆಸ್ ಮಾನದಂಡದ ಹಿನ್ನೆಲೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಬರಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿರುವ ಅವರು ಈ ಬಾರಿ ಆರಂಭಿಕ ಪಂದ್ಯದಲ್ಲಿ ಪೀಕಿಂಗ್ ನಡೆಸಿ ಗಮನಸೆಳೆದಿದ್ದರು. ಆದರೆ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸುವಲ್ಲಿ ವಿಫಲವಾಗಿ ತಂಡದಿಂದ ಹೊರಗುಳಿದಿದ್ದರು. ಜತೆಗೆ ಗಾಯದ ಸಮಸ್ಯೆಯೂ ಅವರಿಗೆ ಕಾಡಿತ್ತು.