ಓಲ್ಡ್ ಟ್ರಾಫರ್ಡ್: ಪೋರ್ಚುಗಲ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರು ಇಂಗ್ಲಿಷ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಮುಖ ತಂಡವಾಗಿರುವ ಮ್ಯಾಂಚೆಸ್ಟರ್(Manchester) ಯುನೈಟೆಡ್ ಕ್ಲಬ್ಗೆ ಗುಡ್ ಬೈ ಹೇಳಿದ್ದಾರೆ. ಈ ವಿಚಾರವನ್ನು ಬುಧವಾರ ಮ್ಯಾಂಚೆಸ್ಟರ್ ಯುನೈಟೆಡ್ ತನ್ನ ಅಧಿಕೃತ ಹೇಳಿಕೆಯಲ್ಲಿ ಪ್ರಕಟಿಸಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ಅವರು ಇತ್ತೀಚೆಗೆ ಪಿಯರ್ಸ್ ಮಾರ್ಗನ್ ಅವರ ಸಂದರ್ಶನದಲ್ಲಿ ಭಾಗವಹಿಸಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮ್ಯಾನೇಜರ್ ಎರಿಕ್ ಟೆನ್ ಹ್ಯಾಗ್ ಅವರ ವಿರುದ್ಧ ಕಿಡಿ ಕಾರಿದ್ದರು. ಅಷ್ಟೇ ಅಲ್ಲದೆ ಮ್ಯಾಂಚೆಸ್ಟರ್ ಯುನೈಟೆಡ್ ಜತೆಗಿನ ಸಂಬಂಧದ ಅಂತ್ಯದ ಬಗ್ಗೆ ಮಾತನಾಡಿದ್ದರು. ಇದೀಗ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ತಂಡದಿಂದ ಅಧಿಕೃತವಾಗಿ ಹೊರ ನಡೆದಿದ್ದಾರೆ.
“ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪರಸ್ಪರ ಒಪ್ಪಂದದ ಮೇರೆಗೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತೊರೆಯುತ್ತಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪರ ಎರಡು ಅವಧಿಯಲ್ಲಿ ಆಡಿದ ರೊನಾಲ್ಡೊ ತಂಡಕ್ಕೆ ಶ್ರೇಷ್ಠವಾದ ಕೊಡುಗೆ ನೀಡಿದ್ದಾರೆ. 346 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿ 145 ಗೋಲುಗಳನ್ನು ಬಾರಿಸಿದ್ದಾರೆ. ಅವರ ಈ ಸಾಧನೆಗೆ ಧನ್ಯವಾದ ಹೇಳಲು ಬಯಸುತ್ತೇವೆ. ರೊನಾಲ್ಡೊ ಹಾಗೂ ಅವರ ಕುಟುಂಬದ ಮುಂದಿನ ಭವಿಷ್ಯಕ್ಕೆ ಕ್ಲಬ್ ವತಿಯಿಂದ ಶುಭ ಹಾರೈಸುತ್ತೇವೆ” ಎಂದು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ | Fifa World Cup| ಕತಾರ್ ಆತಿಥ್ಯದ ಫಿಫಾ ಫುಟ್ಬಾಲ್ ಜಾತ್ರೆಯಲ್ಲಿ ವಿದೇಶಿ ಅಭಿಮಾನಿಗಳ ಪರದಾಟ!