ದೋಹಾ: ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರು ಮತ್ತೆ ಕಿರಿಕ್ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಅಲ್-ಖಲೀಜ್‌ನ ಸಿಬ್ಬಂದಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ ವೇಳೆ ರೊನಾಲ್ಡೊ ಸಿಟ್ಟಿನಿಂದ ಅವರನ್ನು ತಳ್ಳಿದ ಫಟನೆ ನಡೆದಿದೆ.
ಅಲ್-ಖಲೀಜ್ ಮತ್ತು ಅಲ್ ನಾಸರ್ ವಿರುದ್ಧ ನಡೆದ ಪಂದ್ಯ 1-1 ಗೋಲ್ಗಳಿಂದ ಡ್ರಾದಲ್ಲಿ ಅಂತ್ಯಕಂಡಿತು. ಪಂದ್ಯದಲ್ಲಿ ಗೆಲುವು ಸಾಧಿಸದ ಕೋಪದಲ್ಲಿದ್ದ ಅಲ್ ನಾಸರ್ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಿಂದ ಹೊರಹೋಗುತ್ತಿದ್ದ ವೇಳೆ ಎದುರಾಳಿ ತಂಡದ ಸಿಬ್ಬಂದಿಯೊಬ್ಬರು ಓಡಿ ಬಂದು ರೊನಾಲ್ಡೊ ಅವರ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಪಿತ್ತ ನೆತ್ತಿಗೇರಿದಂತೆ ರೊನಾಲ್ಡೊ ಸಿಟ್ಟಿನಿಂದ ಅವರನ್ನು ತಳ್ಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೊನಾಲ್ಡೊ ಅವರು ಈ ರೀತಿ ಕಿರಿಕ್ ಮಾಡುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಅವರು ಇಂತಹ ದುರ್ವರ್ತನೆ ತೋರಿ ದಂಡ ಮತ್ತು ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. ಕಳೆದ ವರ್ಷ ಏಪ್ರಿಲ್ನಲ್ಲಿ ನಡೆದ ಇಪಿಎಲ್ ಟೂರ್ನಿಯ ಪಂದ್ಯದಲ್ಲಿ ಎವರ್‌ಟನ್ ವಿರುದ್ಧ ಯುನೈಟೆಡ್ ತಂಡ 1-0 ಗೋಲ್ ಅಂತರದಿಂದ ಸೋಲು ಕಂಡಿತ್ತು. ಈ ವೇಳೆ ಆಕ್ರೋಶಗೊಂಡ ರೊನಾಲ್ಡೊ ಅಭಿಮಾನಿಯ ಮೊಬೈಲ್ ಫೋನ್ ಒಡೆದು ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ರೊನಾಲ್ಡೊಗೆ ಇಂಗ್ಲೆಂಡ್ ಫುಟ್ಬಾಲ್ ಒಕ್ಕೂಟ ಈ ಶಿಕ್ಷೆ ವಿಧಿಸಿತ್ತು. ಜತೆಗೆ 42.8 ಲಕ್ಷ ರೂ.(50,000 ಯೂರೊ) ದಂಡ ವಿಧಿಸಿತ್ತು.
ಇದನ್ನೂ ಓದಿ Cristiano Ronaldo: ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ದಾಖಲೆ ಬರೆದ ಕ್ರಿಸ್ಟಿಯಾನೋ ರೊನಾಲ್ಡೊ
ಕತಾರ್ನಲ್ಲಿ ನಡೆದ 2022ರ ಫಿಫಾ ವಿಶ್ವ ಕಪ್(Fifa World Cup) ನ 16ರ ಘಟ್ಟದ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಪಂದ್ಯದಿಂದ ಕೈಬಿಡಲಾಗಿತ್ತು. ಇದರ ಸಿಟ್ಟಿನಲ್ಲಿ ಅವರು ತನ್ನ ತಂಡ 2006ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿದರೂ ಆಟಗಾರರೊಂದಿಗೆ ಸಂಭ್ರಮಿಸದೆ ಮೈದಾನದಿಂದ ಹೊರ ನಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ತಂಡದ ಕೋಚ್ ಫೆರ್ನಾಂಡೊ ಸ್ಯಾಂಟೋಸ್ ಜತೆ ರೊನಾಲ್ಡೊ ವಾಗ್ವಾದ ಕೂಡ ನಡೆಸಿದ್ದರು.