ದೋಹಾ: ಕ್ರಿಸ್ಟಿಯಾನೊ ರೊನಾಲ್ಡೊ ಅವರ ಆಟವನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಅಲ್ ನಾಸರ್ ತಂಡದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಗುರುವಾರ ನಿಗದಿಯಾಗಿರುವಂತೆ ಸೌದಿ ಅರೇಬಿಯಾದ ಅಲ್ ನಾಸರ್ ಫುಟ್ಬಾಲ್ ಕ್ಲಬ್ ಪರ ರೊನಾಲ್ಡೊ ಪದಾರ್ಪಣ ಪಂದ್ಯವನ್ನಾಡಬೇಕಿತ್ತು. ಆದರೆ ಅನುಚಿತ ಹಾಗೂ ಹಿಂಸಾತ್ಮಕ ವರ್ತನೆಗೆ ಇಂಗ್ಲಿಷ್ ಫುಟ್ಬಾಲ್ ಅಸೋಸಿಯೇಶನ್ ನವೆಂಬರ್ನಲ್ಲಿ 2 ಪಂದ್ಯಗಳಿಂದ ನಿಷೇಧ ವಿಧಿಸಿರುವುದರಿಂದ ರೊನಾಲ್ಡೊ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ.
ಮ್ಯಾಚೆಂಸ್ಟರ್ ತಂಡವನ್ನು ತೊರೆದ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಏಷ್ಯಾದ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಸೌದಿ ಅರೇಬಿಯಾದ ಅಲ್ ನಾಸರ್ ಕ್ಲಬ್ ಸೇರಿದ್ದರು. ಆದರೆ ಇದೀಗ ಗುರುವಾರ ನಡೆಯುವ ಮೊದಲ ಪಂದ್ಯದಲ್ಲಿ ಅವರಿಗೆ ಆಡಲು ಸಾಧ್ಯವಾಗುತ್ತಿಲ್ಲ. ತಂಡದ ಪರ ಆಡಲು ಅವರು ಜನವರಿ 21 ರವರೆಗೆ ಕಾಯಬೇಕಾಗಿದೆ.
ಕಳೆದ ಎಪ್ರಿಲ್‌ನಲ್ಲಿ ಎವರ್ಟನ್ ವಿರುದ್ಧ ಮ್ಯಾಚೆಂಸ್ಟರ್ ಯುನೈಟೆಡ್ ಸೋಲು ಕಂಡಿತ್ತು. ಈ ಸೋಲಿನ ಸಿಟ್ಟಿನಲ್ಲಿ ರೊನಾಲ್ಡೊ ಅಭಿಮಾನಿಯೊಬ್ಬರ ಫೋನ್ ಒಡೆದು ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ರೊನಾಲ್ಡೊಗೆ ಎರಡು ಪಂದ್ಯಗಳಿಗೆ ಇಂಗ್ಲಿಷ್ ಫುಟ್ಬಾಲ್ ಅಸೋಸಿಯೇಶನ್ ಅಮಾನತುಗೊಳಿಸಿತ್ತು.
ರೊನಾಲ್ಡೊಗೆ ನಿಷೇಧದ ಜತೆಗೆ ದಂಡವನ್ನು ವಿಧಿಸಲಾಗಿತ್ತು. ಆದರೆ ಮ್ಯಾಚೆಂಸ್ಟರ್ ಕ್ಲಬ್ನಿಂದ ಅವರು ಹೊರ ಬಂದ ಕಾರಣ ಅವರು ಅಮಾನತುಗೊಂಡಿರಲಿಲ್ಲ. ಇದೀಗ ಹೊಸ ಕ್ಲಬ್‌ಗೆ ಸೇರಿದಾಗ ನಿಷೇಧ ಶಿಕ್ಷೆ ಮುಂದುವರಿದಿದೆ. ಅದರಂತೆ ರೊನಾಲ್ಡೊ ಈಗ ಸೌದಿ ಪ್ರೊ ಲೀಗ್‌ನಲ್ಲಿ ಎರಡು ಪಂದ್ಯಗಳ ನಿಷೇಧವನ್ನು ಪೂರೈಸಬೇಕಾಗಿದೆ.
ಇದನ್ನೂ ಓದಿ | Cristiano Ronaldo| ಏಷ್ಯಾದಲ್ಲೂ ದಾಖಲೆ ಬರೆಯುವುದೇ ನನ್ನ ಗುರಿ; ಕ್ರಿಸ್ಟಿಯಾನೊ ರೊನಾಲ್ಡೊ!