ದುಬೈ: ಅಶ್ಲೀಲ ವರ್ತನೆ ತೋರಿದ ಕಾರಣದಿಂದ ಕ್ರಿಸ್ಟಿಯಾನೊ ರೊನಾಲ್ಡೊರನ್ನು(Cristiano Ronaldo) ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಅಲ್-ನಾಸರ್(Al-Nassr) ತಂಡವು ಅಲ್ ಶಬಾಬ್(Al-Shabab) ತಂಡದ ವಿರುದ್ಧ 3-2 ಅಂತರದ ಗೆಲುವು ಸಾಧಿಸಿದ ನಂತರ ರೊನಾಲ್ಡೊ ಅಶ್ಲೀಲ ವರ್ತನೆ ತೋರಿದ್ದರು.
ಸೌದಿ ಫುಟ್ಬಾಲ್(Saudi League) ಫೆಡರೇಷನ್ನ ಶಿಸ್ತು ಮತ್ತು ನೀತಿ ಸಮಿತಿಯು ಕ್ರಿಸ್ಟಿಯಾನೊ ರೊನಾಲ್ಡೊಗೆ ಒಂದು ಪಂದ್ಯ ನಿಷೇಧ ವಿಧಿಸಿದೆ. ಪಂದ್ಯದ ಮುಕ್ತಾಯದ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಅಲ್ ಶಬಾಬ್ ತಂಡದ ಬೆಂಬಲಿಗರತ್ತ ಅಶ್ಲೀಲವಾಗಿ ಬೆರಳನ್ನು ತೋರಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ರೊನಾಲ್ಡೊ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು.
ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸೌದಿ ಫುಟ್ಬಾಲ್ ಫೆಡರೇಷನ್ಗೆ 10,000 ಸೌದಿ ರಿಯಲ್ಸ್ (2,666 ಡಾಲರ್) ಹಾಗೂ ದೂರು ದಾಖಲಿಸಿದ ಶುಲ್ಕವಾಗಿ ಅಲ್ ಶಬಾಬ್ ತಂಡಕ್ಕೆ 20,000 ಸೌದಿ ರಿಯಲ್ಸ್ ಪಾವತಿಸಬೇಕು ಎಂದು ಸಮಿತಿಯು ಸೂಚಿಸಿದೆ. ಈ ನಿರ್ಣಯವು ಅಂತಿಮವಾಗಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ Salman Khan: ಸಲ್ಮಾನ್ ಖಾನ್‌ರನ್ನು ನೋಡಿಯೂ ನೋಡದ ಹಾಗೆ ಹೋದ ರೊನಾಲ್ಡೊ; ಫ್ಯಾನ್ಸ್ ಕೆಂಡ!
ರೊನಾಲ್ಡೊ ಅವರು ಈ ರೀತಿ ಕಿರಿಕ್ ಮಾಡುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಅವರು ಇಂತಹ ದುರ್ವರ್ತನೆ ತೋರಿ ದಂಡ ಮತ್ತು ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. 2 ವರ್ಷಗಳ ಹಿಂದೆ ಏಪ್ರಿಲ್ನಲ್ಲಿ ನಡೆದಿದ್ದ ಇಪಿಎಲ್ ಟೂರ್ನಿಯ ಪಂದ್ಯದಲ್ಲಿ ಎವರ್‌ಟನ್ ವಿರುದ್ಧ ಯುನೈಟೆಡ್ ತಂಡ 1-0 ಗೋಲ್ ಅಂತರದಿಂದ ಸೋಲು ಕಂಡಿತ್ತು. ಈ ವೇಳೆ ಆಕ್ರೋಶಗೊಂಡ ರೊನಾಲ್ಡೊ ಅಭಿಮಾನಿಯ ಮೊಬೈಲ್ ಫೋನ್ ಒಡೆದು ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ರೊನಾಲ್ಡೊಗೆ ಇಂಗ್ಲೆಂಡ್ ಫುಟ್ಬಾಲ್ ಒಕ್ಕೂಟ ಈ ಶಿಕ್ಷೆ ವಿಧಿಸಿತ್ತು. ಜತೆಗೆ 42.8 ಲಕ್ಷ ರೂ.(50,000 ಯೂರೊ) ದಂಡ ವಿಧಿಸಿತ್ತು.
💥 Après le match nul entre Al Nassr et Al Khaleej, ce lundi en Arabie saoudite (1-1), Cristiano Ronaldo s'est montré très agacé et a repoussé un membre du staff adverse venu lui demander un selfie au coup de sifflet final. pic.twitter.com/U3jbYa9i41
— RMC Sport (@RMCsport) May 8, 2023
ಕತಾರ್ನಲ್ಲಿ ನಡೆದ 2022ರ ಫಿಫಾ ವಿಶ್ವ ಕಪ್(Fifa World Cup) ನ 16ರ ಘಟ್ಟದ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಪಂದ್ಯದಿಂದ ಕೈಬಿಡಲಾಗಿತ್ತು. ಇದರ ಸಿಟ್ಟಿನಲ್ಲಿ ಅವರು ತನ್ನ ತಂಡ 2006ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿದರೂ ಆಟಗಾರರೊಂದಿಗೆ ಸಂಭ್ರಮಿಸದೆ ಮೈದಾನದಿಂದ ಹೊರ ನಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ತಂಡದ ಕೋಚ್ ಫೆರ್ನಾಂಡೊ ಸ್ಯಾಂಟೋಸ್ ಜತೆ ರೊನಾಲ್ಡೊ ವಾಗ್ವಾದ ಕೂಡ ನಡೆಸಿದ್ದರು.