Site icon Vistara News

ind vs pak : ಹಮಾಸ್​ ಉಗ್ರರ ಬೆಂಬಲಿಸಿದ ರಿಜ್ವಾನ್​ ಮುಂದೆ ಜೈಶ್ರೀರಾಮ್​ ಘೋಷಣೆ; ಪರ- ವಿರೋಧ ಚರ್ಚೆ

Mohammed Rizwan

ಅಹಮದಾಬಾದ್​ : ಭಾರತ ಹಾಗೂ ಪಾಕಿಸ್ತಾನ (ind vs pak) ನಡುವಿನ ವಿಶ್ವ ಕಪ್​ ಕ್ರಿಕೆಟ್ ಪಂದ್ಯ ಅಷ್ಟೊಂದು ಜಿದ್ದಾಜಿದ್ದಿನಿಂದ ಕೂಡಿರಲಿಲ್ಲ. ಭಾರತ ತಂಡದ ಬೌಲಿಂಗ್ ದಾಳಿಗೆ ಬೆದರಿದ ಪಾಕ್​ 191 ರನ್​ಗೆ ಆಲ್​ಔಟ್ ಆದರೆ, ಭಾರತ ತಂಡ ನಿರಾಯಾಸವಾಗಿ 3 ವಿಕೆಟ್​ ಕಳೆದುಕೊಂಡು ಗೆಲುವು ಸಾಧಿಸಿತ್ತು. ಆದರೆ, ಪಂದ್ಯದುದ್ದಕ್ಕೂ ಅಭಿಮಾನಿಗಳ ಅಬ್ಬರ ಜೋರಾಗಿತ್ತು. ಯಾಕೆಂದರೆ 1.32 ಲಕ್ಷ ಸೀಟ್​ ಸಾಮರ್ಥ್ಯದ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಭಾರತೀಯ ಅಭಿಮಾನಿಗಳೇ ತುಂಬಿದ್ದರು. ಅವರಿಗೆ ಸಂತಸಕ್ಕೆ ಯಾವುದೇ ಲಗಾಮು ಇರಲಿಲ್ಲ. ಹೀಗಾಗಿ ಭಾರತೀಯ ತಂಡಕ್ಕೆ ಬೆಂಬಲ ನೀಡುವ ಜತೆಗೆ ವಿರೋಧಿ ತಂಡದ ಆಟಗಾರರನ್ನು ಲೇವಡಿ ಮಾಡುವ ಕೆಲಸ ಜೋರಾಗಿ ನಡೆದಿದೆ. ಅಂತೆಯೇ 49 ರನ್​ಗೆ ಔಟಾಗಿ ಪೆವಿಲಿಯನ್​ಗೆ ಮರಳುತ್ತಿದ್ದ ಮೊಹಮ್ಮದ್​ ರಿಜ್ವಾನ್ ಮುಂದೆ ಜೈ ಶ್ರೀರಾಮ್​ ಎಂದು ಕೂಗಿದ ಘಟನೆ ನಡೆದಿದೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಪಾಕಿಸ್ತಾನ ಈ ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ 6 ವಿಕೆಟ್​ಗಳ ವಿಜಯ ಗಳಿಸಿದ್ದ ವೇಳೆಯಲ್ಲಿ ಶತಕ ಬಾರಿಸಿ ಮಿಂಚಿದ್ದ ರಿಜ್ವಾನ್​, ಪಂದ್ಯದ ಬಳಿಕ ಮಾತನಾಡಿ ತಂಡದ ಗೆಲುವನ್ನು ಇಸ್ರೆಲ್​ನಿಂದ ದಂಡನೆಗೆ ಒಳಗಾಗುತ್ತಿರುವ ಹಮಾಸ್ ಉಗ್ರರಿಗೆ ಅರ್ಪಿಸಿದ್ದರು. ಇದು ಭಾರತೀಯ ಅಭಿಮಾನಿಗಳನ್ನು ಕೆರಳಿಸಿತ್ತು. ಭಾರತ ಹಾಗೂ ಇಸ್ರೇಲ್​ ಉತ್ತಮ ಬಾಂಧವ್ಯ ಹೊಂದಿದ್ದು ನೇರ ಬೆಂಬಲ ಘೋಷಿಸಿದೆ. ಹೀಗಾಗಿ ಭಾರತೀಯರು ಇಸ್ರೇಲ್​ ಗೆಲುವನ್ನು ಈ ಸಮರದಲ್ಲಿ ಬಯಸುತ್ತಿದೆ. ಹೀಗಾಗಿ ರಿಜ್ವಾನ್ ಅವರ ಘೋಷಣೆ ಭಾರತೀಯ ಅಭಿಮಾನಿಗಳನ್ನು ಕೆರಳಿಸಿದೆ. ಅದಕ್ಕಾಗಿ ಅವರು ಔಟಾಗಿ ಬರುತ್ತಿದ್ದಂತೆ ಜೈಶ್ರೀರಾಮ್​ ಕೂಗಿ ಅವರನ್ನು ಲೇವಡಿ ಮಾಡಿದ್ದಾರೆ.

ಈ ಪಂದ್ಯದಲ್ಲಿ 49 ರನ್ ಗಳಿಸಿದ್ದ ರಿಜ್ವಾನ್ ಬುಮ್ರಾ ಅವರ ನಿಧಾನಗತಿಯ ಎಸೆತದಲ್ಲಿ ಬೌಲ್ಡ್​ ಆಗಿದ್ದರು. ಅವರು ಡ್ರೆಸ್ಸಿಂಗ್ ರೂಮ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಪ್ರೇಕ್ಷಕರ ಒಂದು ವಿಭಾಗವು ಅವರನ್ನು ಅಣಕಿಸಲು ‘ಜೈ ಶ್ರೀ ರಾಮ್’ ಎಂದು ಕೂಗಿತು. ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಕ್ರಿಕೆಟ್ ಅಭಿಮಾನಿಗಳು ಅಹಮದಾಬಾದ್ ಅಭಿಮಾನಿಗಳ ಕ್ರಮಗಳನ್ನು ಟೀಕಿಸಿದರೆ, ಕೆಲವು ಬಳಕೆದಾರರು ಅಹಮದಾಬಾದ್ ಪ್ರೇಕ್ಷಕರ ಕ್ರಮಗಳನ್ನು ಸಮರ್ಥಿಸಿದ್ದಾರೆ.

ಅನೇಕ ಭಾರತೀಯ ರಾಜಕಾರಣಿಗಳು ಸಹ ಮುಂದೆ ಬಂದು ರಿಜ್ವಾನ್ ಬಗ್ಗೆ ಜನಸಮೂಹದ ನಡವಳಿಕೆಯನ್ನು ಟೀಕಿಸಿದರು. ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಟ್ವೀಟ್ ಮಾಡಿ, “ಭಾರತವು ಕ್ರೀಡಾ ಮನೋಭಾವ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ, ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನಿ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ರೀತಿ ಸ್ವೀಕಾರಾರ್ಹವಲ್ಲ. ಕ್ರೀಡೆಯು ದೇಶಗಳ ನಡುವೆ ಒಂದುಗೂಡಿಸುವ ಶಕ್ತಿಯಾಗಿರಬೇಕು, ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ದ್ವೇಷವನ್ನು ಹರಡಲು ಅದನ್ನು ಸಾಧನವಾಗಿ ಬಳಸುವುದು ಖಂಡನೀಯ” ಎಂದು ಅವರು ಹೇಳಿಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ : ICC World Cup 2023 : ಮೋದಿ ಸ್ಟೇಡಿಯಮ್​ನಲ್ಲಿ ಲೇಡಿ ಪೊಲೀಸ್​ ಅಭಿಮಾನಿಗಳ ನಡುವೆ ಜಗಳ

ಶನಿವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಜಸ್ಪ್ರೀತ್ ಬುಮ್ರಾ ಮತ್ತು ಕುಲ್ದೀಪ್ ಯಾದವ್ ಚೆಂಡಿನಿಂದ ಮಿಂಚಿದರೆ, ಭಾರತದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್​ನಲ್ಲಿ ಮಿಂಚಿದ್ದಾರೆ. ಪ್ರವಾಸಿ ತಂಡವನ್ನು 191 ರನ್​ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ 30.3 ಓವರ್​ಗಳಲ್ಲಿ ಗುರಿ ತಲುಪಿ ಐಸಿಸಿ ವಿಶ್ವಕಪ್ ಪಾಯಿಂಟ್ಸ್ ಟೇಬಲ್​​ನಲ್​ಲಿ ಅಗ್ರಸ್ಥಾನಕ್ಕೇರಿತು.

Exit mobile version