ಜೊಹಾನ್ಸ್‌ಬರ್ಗ್ : ದಕ್ಷಿಣ ಆಫ್ರಿಕಾದಲ್ಲಿ ಮುಂಬರುವ ವರ್ಷ ನಡೆಯಲಿರುವ CSA Cricket League ಟೂರ್ನಿಯ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಗೆಲ್ಲುವ ಯೋಜನೆ ಹಾಕಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಭರ್ಜರಿ ಯೋಜನೆ ರೂಪಿಸಿಕೊಂಡಿದೆ. ಅಲ್ಲಿ ಜೊಹಾನ್ಸ್‌ಬರ್ಗ್ ಸೂಪರ್ ಕಿಂಗ್ ತಂಡದ ಮಾಲೀಕತ್ವ ಹೊಂದಿರುವ ಸಿಎಸ್‌ಕೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಯಶಸ್ಸು ತಂದು ಕೊಟ್ಟಿರುವ ಸ್ಟೀಫನ್ ಪ್ಲೆಮಿಂಗ್ ಅವರನ್ನು ಕೋಚ್ ಆಗಿ ನೇಮಕ ಮಾಡಿಕೊಂಡಿದ್ದರೆ, ಸಿಎಸ್‌ಕೆ ಮಾಜಿ ಆಟಗಾರ ಫಾಫ್ ಡು ಪ್ಲೆಸಿಸ್ ಅವರಿಗೆ ನಾಯಕನ ಪಟ್ಟ ನೀಡಲು ಮುಂದಾಗಿದೆ. ಸಿಎಸ್‌ಕೆ ಯೋಜನೆಗಳ ಬಗ್ಗೆ ಕ್ರಿಕೆಟ್ ವೆಬ್‌ಸೈಟ್ ಒಂದು ವರದಿ ಮಾಡಿದೆ.
CSA Cricket League ಟೂರ್ನಿಯಲ್ಲಿ ಜೊಹಾನ್ಸ್ ಬರ್ಗ್ ತಂಡವನ್ನ ಖರೀದಿಸಿದ್ದಲ್ಲದೆ, ಮಾಜಿ ಆಟಗಾರ ಫಾಫ್ ಡು ಪ್ಲೆಸಿಸ್ ಹಾಗೂ ಸಿಎಸ್‌ಕೆ ಆಲ್‌ರೌಂಡರ್ ಮೊಯೀನ್ ಅಲಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಇಬ್ಬರು ಆಟಗಾರರನ್ನು ಬಳಸಿಕೊಂಡು ಉತ್ತಮ ತಂಡ ಕಟ್ಟುವುದು ಸಿಎಸ್‌ಕೆ ಮ್ಯಾನೇಜ್ಮೆಂಟ್ ಯೋಜನೆಯಾಗಿದೆ.
ಏತನ್ಮಧ್ಯೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಅಲ್ಲಿನ ತಂಡಕ್ಕೆ ಮೆಂಟರ್ ಆಗಿ ಬಳಸಿಕೊಳ್ಳುವ ಯೋಜನೆಯನ್ನು ಆಡಳಿತ ಮಂಡಳಿ ಮಾಡಿಕೊಂಡಿತ್ತು. ಆದೆರೆ ಬಿಸಿಸಿಐ ಅದಕ್ಕೆ ಒಪ್ಪಿರಲಿಲ್ಲ. ಹೊರ ದೇಶಗಳ ಲೀಗ್‌ಗಳಲ್ಲಿ ಪಾಲ್ಗೊಳ್ಳಬೇಕಾದರೆ ಇಲ್ಲಿನ ಒಪ್ಪಂದ ಮುರಿದುಕೊಳ್ಳಬೇಕು ಎಂದು ಖಡಾಖಂಡಿತವಾಗಿ ಹೇಳಿತ್ತು. ಹೀಗಾಗಿ ಹೊಸ ಯೋಜನೆ ರೂಪಿಸಿ, ಸ್ಟೀಫನ್ ಹಾಗೂ ಫಾಫ್ ಡು ಪ್ಲೆಸಿಸ್‌ಗೆ ಪಟ್ಟ ಕಟ್ಟುವುದಕ್ಕೆ ಮುಂದಾಗಿದೆ.
ಫಾಫ್ ಡು ಪ್ಲೆಸಿಸ್ ಅವರು ಮೂರು ಬಾರಿ ಐಪಿಎಲ್ ಚಾಂಪಿಯನ್‌ಷಿಪ್ ಗೆದ್ದ ವೇಳೆ ಆ ತಂಡದ ಸದಸ್ಯರಾಗಿದ್ದಾರೆ. ಸಿಎಸ್‌ಎಕೆ ಒಟ್ಟಾರೆ ನಾಲ್ಕು ಬಾರಿ ಚಾಂಪಿಯನ್ ಆಗಿದೆ. ಅವರು ಒಟ್ಟು ೧೦ ವರ್ಷ ಆ ತಂಡದ ಪರ ಆಡಿದ್ದರು. ೨೦೧೧ರಿಂದ ೧೫ ಹಾಗೂ ೨೦೧೮ರಿಂದ ೨೦೨೧ರವರೆಗೆ ಚೆನ್ನೈ ತಂಡದ ಸದಸ್ಯರಾಗಿದ್ದರು. ಅಲ್ಲದೆ ಚೆನ್ನೈ ವಿರುದ್ಧ ೧೦೦ ಪಂದ್ಯಗಳನ್ನು ಆಡಿದ್ದರು.
ಇದನ್ನೂ ಓದಿ | ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ ಮಿನಿ IPL, ಫ್ರಾಂಚೈಸಿ ಮಾಲೀಕರ ದೌಡು