Site icon Vistara News

CSK vs DC: ಹ್ಯಾಟ್ರಿಕ್​ ಗೆಲುವಿನ ವಿಶ್ವಾಸದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ; ಡೆಲ್ಲಿ ಎದುರಾಳಿ

CSK vs DC

ವಿಶಾಖಪಟ್ಟಣಂ: ಹಾಲಿ ಚಾಂಪಿಯನ್​ ಖ್ಯಾತಿಗೆ ತಕ್ಕ ಪ್ರದರ್ಶನ ತೋರುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings) ತಂಡ​ ಅಜೇಯ ಗೆಲುವಿನ ಓಕ್ಕೆ ಬ್ರೇಕ್​ ಹಾಕಲು ರಿಷಭ್​ ಪಂತ್​ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್​(Delhi Capitals) ರೆಡಿಯಾಗಿದೆ. ಭಾನುವಾರದ ದ್ವಿತೀಯ ಐಪಿಎಲ್(IPL 2024)​ ಪಂದ್ಯದಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿದೆ. ಚೆನ್ನೈ ಗೆದ್ದರೆ ಈ ಬಾರಿಯ ಕೂಟದಲ್ಲಿ ಹ್ಯಾಟ್ರಿಕ್​ ಗೆಲುವು ತನ್ನದಾಗಿಸಿಕೊಳ್ಳಲಿದೆ.

ಚೆನ್ನೈ ಸಮರ್ಥ ತಂಡ


ಚೆನ್ನೈ ತಂಡ ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ ಎಲ್ಲ ವಿಭಾಗದಲ್ಲಿಯೂ ಅತ್ಯಂತ ಬಲಿಷ್ಠ ಮತ್ತು ಪರಿಪೂರ್ಣ ತಂಡವಾಗಿದೆ. ಅದರಲ್ಲೂ ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿಯುವ ಶಿವಂ ದುಬೆ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ ಶೈಲಿಯ ಮೂಲಕ ಪ್ರತಿ ಪಂದ್ಯದಲ್ಲಿಯೂ ಎದುರಾಳಿ ತಂಡಕ್ಕೆ ದೊಡ್ಡ ಇಂಪ್ಯಾಕ್ಟ್​ ಆಗಿ ಕಾಡುತ್ತಿದ್ದಾರೆ. ಚೊಚ್ಚಲ ಐಪಿಎಲ್​ ಟೂರ್ನಿಯನ್ನಾಡುತ್ತಿರುವ ನ್ಯೂಜಿಲ್ಯಾಂಡ್​ನ ರಚಿನ್​ ರವಿಂದ್ರ ಕೂಡ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಯುವ ಆಟಗಾರ ಸಮೀರ್ ರಿಜ್ವಿ ಕೂಡ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಿರಿಯ ಆಟಗಾರ ಅಜಿಂಕ್ಯ ರಹಾನೆ ಯುವ ಆಟಗಾರರು ಕೂಡ ನಾಚುವಂತಹ ಫೀಲ್ಡಿಂಗ್​ ಮತ್ತು ಬ್ಯಾಟಿಂಗ್​ ಮೂಲಕ ಗಮನಸೆಳೆಯುತ್ತಿದ್ದಾರೆ. ಆಡಿದ 2 ಪಂದ್ಯಗಳಲ್ಲಿಯೂ ಕೂಡ ರಹಾನೆ ಅದ್ಭುತ ಡೈವಿಂಗ್​ ಮೂಲಕ ಕ್ಯಾಚ್​ ಪಡೆದಿದ್ದರು.

ಇದನ್ನೂ ಓದಿ IPL 2024: ಮುಂಬೈ ತಂಡಕ್ಕೆ ಮತ್ತಷ್ಟು ಚಿಂತೆ ಹೆಚ್ಚಿಸಿದ ಸೂರ್ಯಕುಮಾರ್ ಫಿಟ್‌ನೆಸ್‌

​ಮಧ್ಯಮ ಕ್ರಮಾಂಕದಲ್ಲಿ ಡೇರಿಯಲ್​ ಮಿಚೆಲ್​ ಮತ್ತು ರವೀಂದ್ರ ಜಡೇಜಾ ಕೂಡ ಬಿರುಸಿನ ಬ್ಯಾಟಿಂಗ್​ ಮೂಲಕ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾಗುತ್ತಿದ್ದಾರೆ. ಬೌಲಿಂಗ್​ನಲ್ಲಿ ಪತಿರಾಣ, ಮುಸ್ತಫಿಜುರ್​ ರೆಹಮಾನ್​, ದೀಪಕ್​ ಚಹರ್​, ತುಷಾರ್​ ದೇಶ್​ಪಾಂಡೆ, ಜಡೇಜಾ ಇವರೆಲ್ಲ ಎದುರಾಳಿಗಳನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.

ಡೆಲ್ಲಿಗೆ ಬ್ಯಾಟಿಂಗ್​ ಚೇತರಿಕೆ ಅತ್ಯಗತ್ಯ


ಡೆಲ್ಲಿ ಕ್ಯಾಪಿಟಲ್ಸ್​ ಪರ ಯಾರು ಕೂಡ ನಿಂತು ಆಡುವ ಆಟಗಾರರಿಲ್ಲ. ಇದು ತಂಡದ ಸೋಲಿಗೆ ಪ್ರಮುಖ ಕಾರಣ. ಮಿಚೆಲ್​ ಮಾರ್ಷ್​, ಡೇವಿಡ್​ ವಾರ್ನರ್​, ನಾಯಕ ರಿಷಭ್​ ಪಂತ್​ ಕ್ರೀಸ್​ಗೆ ಇಳಿದ ತಕ್ಷಣ ಬಡಬಡನೆ ಒಂದೆರಡು ಸಿಕ್ಸರ್​ ಬಾರಿಸಿ ಪೆವಿಲಿಯನ್​ ಸೇರುತ್ತಿದ್ದಾರೆ. ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಬಲ್ಲ ಆಟಗಾರರ ಕೊರತೆ ತಂಡದಲ್ಲಿ ಎದ್ದು ಕಾಣುತ್ತಿದೆ. ಇದಕ್ಕೆ ಕಳೆದ 2 ಪಂದ್ಯಗಳ ಫಲಿತಾಂಶವೇ ಉತ್ತಮ ನಿದರ್ಶನ. ಗೆಲುವಿನ ಅಂಚಿನವರೆಗೆ ಬಂದರೂ ಕೂಡ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಬೌಲಿಂಗ್​ ಕೂಡ ಅಷ್ಟಕಷ್ಟೇ. ಅನ್ರಿಜ್​ ನೋರ್ಜೆ 10ರ ಸರಾಸರಿಯಲ್ಲಿ ರನ್​ ಬಿಟ್ಟುಕೊಡುತ್ತಿದ್ದಾರೆ. ಕುಲ್​ದೀಪ್​ ರನ್​ ಕಂಟ್ರೋಲ್​ ಮಾಡಿದರೂ ಕೂಡೆ ವಿಕೆಟ್​ ಕೀಳುವಲ್ಲಿ ವಿಫಲರಾಗಿದ್ದಾರೆ. ಒಟ್ಟಾರೆ ಚೆನ್ನೈ ವಿರುದ್ಧ ಸಂಘಟಿತ ಪ್ರದರ್ಶನ ತೋರಿದರೆ ಗೆಲುವು ಕಾಣಬಹುದು ಇಲ್ಲವಾದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಲ್ಲ.

ಮುಖಾಮುಖಿ


ಇತ್ತಂಡಗಳು ಇದುವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿಯಾಗವೆ. ಇದರಲ್ಲಿ ಚೆನ್ನೈ 19 ಪಂದ್ಯ ಗೆದ್ದರೆ, ಡೆಲ್ಲಿ 10 ಪಂದ್ಯ ಜಯಿಸಿದೆ. ಕಳೆದ ಆವೃತ್ತಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿಯೂ ಚೆನ್ನೈ ತಂಡವೇ ಗೆದ್ದಯ ಬೀಗಿತ್ತು. ಈ ಸೋಲಿಗೆ ಡೆಲ್ಲಿ ಈ ಬಾರಿ ಸೇಡು ತೀರಿಸೀತೇ ಎನ್ನುವುದು ಪಂದ್ಯದ ಕುತೂಹಲ.

ಸಂಭಾವ್ಯ ಆಡುವ ಬಳಗ


ಡೆಲ್ಲಿ ಕ್ಯಾಪಿಟಲ್ಸ್​:
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಕಿ ಭುಯಿ, ರಿಷಭ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ಕುಲದೀಪ್ ಯಾದವ್, ಅನ್ರಿಚ್ ನಾರ್ಜೆ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್.

ಚೆನ್ನೈ ಸೂಪರ್​ ಕಿಂಗ್ಸ್​: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್​ ಕೀಪರ್​), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್.

Exit mobile version