Site icon Vistara News

CSK vs KKR: ಅಜೇಯ ಕೆಕೆಆರ್​ಗೆ ಸವಾಲೊಡ್ಡೀತೇ ಹಾಲಿ ಚಾಂಪಿಯನ್​ ಚೆನ್ನೈ

CSK vs KKR

ಚೆನ್ನೈ: ಈ ಬಾರಿಯ ಐಪಿಎಲ್(IPL 2024)​ ಕೂಟದ ಮತ್ತೊಂದು ಅಜೇಯ ತಂಡವಾದ ಬಲಿಷ್ಠ ಕೆಕೆಆರ್​(CSK vs KKR) ಮತ್ತು ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಸೋಮವಾರದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇದು ಚೆನ್ನೈಗೆ ತವರಿನ ಪಂದ್ಯವಾದ ಕಾರಣ ಪಂದ್ಯ ಹೈವೋಲ್ಟೇಜ್​ನಿಂದ ಕೂಡಿರುವ ಸಾಧ್ಯತೆ ಅಧಿಕವಾಗಿದೆ.

ಚೆನ್ನೈ ಆಡಿದ 4 ಪಂದ್ಯಗಳ ಪೈಕಿ ತಲಾ 2 ಗೆಲುವು ಮತ್ತು ಸೋಲು ಕಂಡಿದೆ. 2 ಗೆಲುವು ಕಂಡದ್ದು ತವರಿನ ಪಂದ್ಯದಲ್ಲಿ. ಹೀಗಾಗಿ ತವರಿನಲ್ಲಿ ಬಲಿಷ್ಠವಾಗಿರುವ ಗಾಯಕ್ವಾಡ್​ ಪಡೆ ಎದುರಾಳಿ ಕೆಕೆಆರ್​ ಎಷ್ಟೇ ಬಲಿಷ್ಠವಾಗಿದ್ದರೂ ಕೂಡ ಅಷ್ಟು ಸುಲಭವಾಗಿ ಪಂದ್ಯವನ್ನು ಬಿಟ್ಟುಕೊಡದು. ಅತ್ತ ಕೆಕೆಆರ್​ ತಂಡಕ್ಕೆ ಮೈದಾನ ಯಾವುದೇ ಇರಲಿ ಮುನ್ನುಗ್ಗಿ ಬಾರಿಸುವುದೊಂದೆ ತಂಡದ ಪ್ರಧಾನ ಯೋಜನೆ. ಹೀಗಾಗಿ ನಾಳಿನ ಪಂದ್ಯವನ್ನು ಕ್ರಿಕೆಟ್​ ಅಭಿಮಾನಿಗಳು ರೋಚಕ ಎಂದು ನಿರೀಕ್ಷೆ ಮಾಡಬಹುದಾಗಿದೆ.

ಕೆಕೆಆರ್​ ಎಲ್ಲ ವಿಭಾಗದಲ್ಲೂ ಬಲಿಷ್ಠ


ಕೆಕೆಆರ್​ ತಂಡಕ್ಕೆ ದೊಡ್ಡ ಲಾಭವೆಂದರೆ ಸುನೀಲ್​ ನರೈನ್​ ಅವರ ಪ್ರಚಂಡ ಬ್ಯಾಟಿಂಗ್​ ಫಾರ್ಮ್ ಪಂದ್ಯದಿಂದ ಪಂದ್ಯಕ್ಕೆ ಅವರು ಸಿಡಿಯುತ್ತಲೇ ಇದ್ದಾರೆ. ಬೌಲರ್​ ಆಗಿರುವ ಅವರು ಆರಂಭಿಕಾಗಿ ಕಣಕ್ಕಿಳಿದು ಕಡಿಮೆ ಎಸೆತಗಳಿಂದ ದೊಡ್ಡ ಮೊತ್ತ ಪೇರಿಸುತ್ತಾರೆ. ಇದು ತಂಡಕ್ಕೆ ಬೋನಸ್​ ಆಗಿದೆ. ತಂಡಕ್ಕೆ ಹೆಚ್ಚುವರಿ ಬ್ಯಾಟರ್​ ಆಯ್ಕೆಯೂ ಸಿಕ್ಕಂತಾಗುತ್ತದೆ. 18 ವರ್ಷದ ಆಂಗ್ಕ್ರಿಶ್ ರಘುವಂಶಿ ಕೂಡ ಕಳೆದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ಗಮನಸೆಳೆದಿದ್ದರು. ಈ ಪಂದ್ಯದಲ್ಲೂ ತಂಡ ಇವರ ಮೇಲೆ ಹೆಚ್ಚಿನ ಬರವಸೆ ಇರಿಸಿದೆ. ರಸೆಲ್ ಅವರಂತೂ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಉತ್ತಮ ಫಾರ್ಮ್​ನಲ್ಲಿದ್ದಾರೆ. ರಿಂಕು ಸಿಂಗ್​ ವಿಚಾರದಲ್ಲಿ ಏನು ಹೇಳಬೇಕೆಂದಿಲ್ಲ. ಕೊಟ್ಟ ಕೆಲಸವನ್ನು ಅಚ್ಚಕಟ್ಟಾಗಿ ಮಾಡಿ ಮುಗಿಸುತ್ತಾರೆ. ಹೀಗಾಗಿ ತಂಡಕ್ಕೆ ಸದ್ಯ ಯಾವುದೇ ಚಿಣತೆ ಇಲ್ಲ.

ಚೆನ್ನೈ ತಂಡ ಆಡಿದ ಆರಂಭಿಕ 2 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಮೆರೆದಾಡಿತ್ತು. ಆ ಬಳಿಕ ಸತತ 2 ಸೋಲು. ಇದೀಗ 5ನೇ ಪ್ರಯತ್ನದಲ್ಲಿ ಮತ್ತೆ ಗೆಲುವಿನ ಹಳಿ ಏರುವ ಸಿದ್ಧತೆಯಲ್ಲಿದೆ. ಟಿ20 ಆಡುವ ಸಲುವಾಗಿ ವೀಸಾ ಕೆಲಸಕ್ಕಾಗಿ ತವರಿಗೆ ತೆರಳಿರುವ ಬಾಂಗ್ಲಾ ವೇಗಿ ಮುಸ್ತಫಿಜುರ್​ ರೆಹಮಾನ್​ ಈ ಪಂದ್ಯಕ್ಕೂ ಅನುಮಾನ ಎನ್ನಲಾಗಿದೆ. ಮೊಯಿನ್​ ಅಲಿ ಕಳೆದ ಪಂದ್ಯದಲ್ಲಿ ಆಡಿದರೂ ಕೂಡ ಅವರಿಂದ ನಿರೀಕ್ಷಿತ ಮಟ್ಟದ ಆಟ ಕಂಡುಬಂದಿರಲಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅವರು ಸಿಡಿದು ನಿಲ್ಲಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ IPL 2024: ಕ್ಯಾಚ್​ ಮೂಲಕ ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ಕಿಂಗ್​ ಕೊಹ್ಲಿ

ಮುಖಾಮುಖಿ


ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಇದುವರೆಗಿನ ಐಪಿಎಲ್​ ಟೂರ್ನಿಯಲ್ಲಿ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ 18 ಪಂದ್ಯ ಗೆದ್ದಿದೆ. ಕೆಕೆಆರ್​ 10 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಕಳೆದ ಆವೃತ್ತಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯ ಗೆಲುವು ಮತ್ತು ಸೋಲು ಕಂಡಿದೆ.

ಉಭಯ ತಂಡಗಳು


ಚೆನ್ನೈ ಸೂಪರ್​ ಕಿಂಗ್ಸ್​: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

ಕೆಕೆಆರ್​: ಫಿಲಿಪ್ ಸಾಲ್ಟ್ (ವಿಕೆ), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

Exit mobile version