ಹೈದರಾಬಾದ್: ಬುಧವಾರ ನಡೆದಿದ್ದ ರಾಜಸ್ತಾನ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದ ಅವಮಾನಕ್ಕೆ ಸಿಲುಕಿತ್ತು. ಆರ್‌ಸಿಬಿ ಸೋಲು ಕಾಣುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು(Ambati Rayudu) ಆರ್‌ಸಿಬಿ(CSK vs RCB) ತಂಡವನ್ನು ಟ್ರೋಲ್ ಮಾಡಿದ್ದರು. ಇದೀಗ ಮತ್ತೆ ನಾಲಿಗೆ ಹರಿಬಿಟ್ಟಿದ್ದು, ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.
ಪ್ಲೇ ಆಫ್ಸ್ ರೇಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರದಬ್ಬಿದ ದಿನದಿಂದಲೂ ಸಿಎಸ್‌ಕೆ ಮಾಜಿ ಬ್ಯಾಟರ್ ಅಂಬಾಟಿ ರಾಯುಡು ನಾನಾ ರೀತಿಯಲ್ಲಿ ಆರ್‌ಸಿಬಿ ತಂಡವನ್ನು ಟೀಕಿಸುತ್ತಾಲೇ ಬಂದಿದಿದ್ದರು. ಇವರಿಗೆ ಚೆನ್ನೈ ತಂಡದ ಅಭಿಮಾನಿಗಳು, ಹಾಲಿ ಆಟಗಾರರು ಕೂಡ ಉತ್ತಮ ಸಾಥ್ ನೀಡಿದ್ದರು. ಇದೀಗ ರಾಯುಡು ಶುಕ್ರವಾರ ಟ್ವೀಟ್ ಮಾಡಿ ಆರ್‌ಸಿಬಿ ತಂಡ ಇಷ್ಟು ವರ್ಷ ಟ್ರೋಫಿ ಗೆಲ್ಲದೇ ಇರುವುದಕ್ಕೆ ವಿರಾಟ್ ಕೊಹ್ಲಿ ಮತ್ತು ತಂಡದ ಮಾಲೀಕರೇ ಮುಖ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
“ಆರ್‌ಸಿಬಿ ಬೆಂಬಲಿಗರನ್ನು ಕಂಡು ನನ್ನ ಹೃದಯ ಉಕ್ಕುತ್ತಿದೆ. ಹಲವು ವರ್ಷಗಳಿಂದ ಒಂದೇ ಉತ್ಸಾಹ ಮತ್ತು ಪ್ರೀತಿಯಿಂದ ಅವರು ತಮ್ಮ ತಂಡವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ವ್ಯಕ್ತಿ ಪೂಜೆ ಮತ್ತು ವೈಯಕ್ತಿಕ ಮೈಲುಗಲ್ಲುಗಳಿಗಿಂತಲೂ ತಂಡಕ್ಕೆ ಟ್ರೋಫಿ ಗೆದ್ದುಕೊಡಬೇಕು ಎಂಬುದು ತಂಡದ ಉದ್ದೇಶ ಆಗಿದ್ದರೆ, ಈಗಾಗಲೇ ತಂಡ ಟ್ರೋಫಿ ಗೆಲ್ಲುತ್ತಿತ್ತು. ಆರ್‌ಸಿಬಿ ಕಳೆದ 17 ಆವೃತ್ತಿಯಲ್ಲಿ ಎಂತಹ ಅದ್ಭುತ ಆಟಗಾರರನ್ನು ಕೈಬಿಟ್ಟಿದೆ ಎಂಬುದನ್ನು ನೆನಪಿಸಿಕೊಳ್ಳಿ. ತಂಡಕ್ಕೆ ಮೊದಲ ಆದ್ಯತೆ ನೀಡುವ ಆಟಗಾರರನ್ನು ತರುವಂತೆ ಮ್ಯಾನೇಜ್ಮೆಂಟ್ ಮೇಲೆ ಒತ್ತಡ ಹಾಕಿ. ಮೆಗಾ ಆಕ್ಷನ್ ಮೂಲಕ ತಂಡ ಹೊಸ ಅಧ್ಯಾಯ ಬರೆಯಲಿ” ಎಂದು ರಾಯುಡು ಗೇಲಿ ಮಾಡಿ ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಸೋತ ವೇಳೆ ರಾಯುಡು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡು ‘5 ಬಾರಿ ಚಾಂಪಿಯನ್ಸ್ ಯಾರು ಎಂಬುದನ್ನು ಕೆಲವೊಮ್ಮೆ ನೆನಪಿಸಿಕೊಳ್ಳಬೇಕಾಗಿದೆ’ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಗೆ ಸಿಎಸ್‌ಕೆ ಆಟಗಾರರಾದ ದೀಪಕ್ ಚಹರ್, ಮತೀಶ ಪತಿರಣ ಮತ್ತು ತುಶಾರ್ ದೇಶಪಾಂಡೆ ಕಾಮೆಂಟ್ ಮಾಡುವ ಮೂಲಕ ಆರ್‌ಸಿಬಿ ತಂಡವನ್ನು ಗೇಲಿ ಮಾಡಿದ್ದರು.
ಅಭಿಮಾನಿಗಳ ದುರಂಹಕಾರವೇ ಆರ್‌ಸಿಬಿ ಸೋಲಿಗೆ ಕಾರಣ
“ಜೀವನದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ನಿಮ್ಮ ಬಾಯಿ ಮುಚ್ಚಿಕೊಂಡು ಮುಂದುವರಿಯಿರಿ. ನೀವು ಮಾಡುತ್ತಿರುವ ಯಾವುದೇ ಕೆಲಸದ ವೇಳೆ ಗದ್ದಲ ಮಾಡಿದಾಗ ಆ ಕೆಲಸವನ್ನು ಉತ್ತಮವಾಗಿ ಮಾಡಲು ಸಾಧ್ಯವಿಲ್ಲ. ಆರ್‌ಸಿಬಿ ಅಭಿಮಾನಿಗಳು ಅನಗತ್ಯ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಅತಿಯಾಗಿ ತೋರಿಸುತ್ತಿದ್ದರು. ಅದಕ್ಕಾಗಿಯೇ ಅಶ್ವಿನ್ ಮುಂದಿನ ಪಂದ್ಯದಲ್ಲಿ ಆರ್ಸಿಬಿಯ ಅಹಂ ಇಳಿಸಿದರು. ಅದಕ್ಕಾಗಿಯೇ ಕ್ರಿಕೆಟ್ನಲ್ಲಿ ನಿಮ್ಮ ಬಾಯಿ ಮುಚ್ಚಿ ಆಡಬೇಕು ಎಂದು ಹೇಳುವುದು ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.