ಲಕ್ನೋ: ಗುರುವಾರ ನಡೆದ ವಿಶ್ವಕಪ್ನ 10ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ(AUS vs SA) ಎದುರು 134ರನ್ಗಳ ಹೀನಾಯ ಸೋಲು ಕಂಡಿದೆ. ಇದು ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ(Australia vs South Africa) ಎದುರಿಸಿದ ಅತಿ ದೊಡ್ಡ ಸೋಲಾಗಿದೆ. ಈ ಸೋಲು ತಂಡಕ್ಕೆ ಬೇಸರ ತಂದಿದೆ ಎಂದು ನಾಯಕ ಪಾಟ್ ಕಮಿನ್ಸ್(Pat Cummins) ಹೇಳಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಕಮಿನ್ಸ್ ‘ಈ ಸೋಲು ನಿಜಕ್ಕೂ ಎಲ್ಲರಿಗೂ ನೋವು ತಂದಿದೆ. ಗೆಲ್ಲುವ ಮಾರ್ಗಗಳನ್ನು ಶೀಘ್ರವಾಗಿ ಕಂಡು ಹಿಡಿಯಬೇಕಿದೆ. ಮುಂದಿನ ಪಂದ್ಯಗಳಲ್ಲಿ ಗೆಲುವಿನ ಟ್ರ್ಯಾಕ್ಗೆ ಬರಲು ಪ್ರಯತ್ನಿಸುತ್ತೇವೆ. ನಾವು ಮಾಡುತ್ತಿರುವ ತಪ್ಪುಗಳನ್ನು ತಿದ್ದುಕೊಳ್ಳುತ್ತೇವೆ’ ಎಂದು ಹೇಳಿದರು.
“ಏಕನಾ ಮೈದಾನದ ಪಿಚ್ ಹೇಗೆ ವರ್ತಿಸುತ್ತದೆ ಎಂದು ತಿಳಿದಿರಲಿಲ್ಲ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರೆ ತಂಡ ಹಿಡಿತ ಸಾಧಿಸುವ ಸಾಧ್ಯತೆ ಇತ್ತು. ಇನ್ನು ಈ ಪಂದ್ಯದ ಬಗ್ಗೆ ಮಾತನಾಡಿ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಪಂದ್ಯ ಮುಗಿದು ಹೋಗಿದೆ. ಮುಂದಿನ ಪಂದ್ಯದಲ್ಲಿ ಸಮರ್ಥವಾಗಿ ಮರಳುವ ವಿಶ್ವಾಸ ನಮ್ಮ ತಂಡದ ಆಟಗಾರರಲ್ಲಿದೆ” ಎಂದರು.
ಅಗ್ರಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ
ಇಲ್ಲಿನ ಅಟಲ್‌ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೂತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್ ಡಿ ಕಾಕ್ ಅವರ ಶತಕ ಮತ್ತು ಐಡೆನ್ ಮಾರ್ಕ್ರಮ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗೆ 311 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಕಂಡು ಬೆದರಿದ ಆಸೀಸ್ 40.5 ಓವರ್ಗಳಲ್ಲಿ 177 ರನ್ಗೆ ಸರ್ವಪತನ ಕಂಡಿತು. ದಕ್ಷಿಣ ಆಫ್ರಿಕಾ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದಿದೆ. 2ನೇ ಸ್ಥಾನದಲ್ಲಿದ್ದ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ.
ದಕ್ಷಿಣ ಆಫ್ರಿಕಾ ಪರ ಫಾತಕ ಸ್ಫೆಲ್ ನಡೆಸಿದ ಕಗಿಸೊ ರಬಾಡ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶತಕ ವೀರ ಡಿ ಕಾಕ್ ಪಂದ್ಯಶೇಷ್ಠ ಪ್ರಶಸ್ತಿಗೆ ಭಾಜನರಾದರು. ಆಸೀಸ್ ಬೌಲರ್ಗಳಿಗೆ ಆರಂಭದಿಂದಲೇ ಬೆಂಡೆತ್ತಿದ ಡಿ ಕಾಕ್ 5 ಆಕರ್ಷಕ ಸಿಕ್ಸರ್ ಮತ್ತು 8 ಬೌಂಡರಿ ಸಿಡಿಸಿ 106 ಎಸೆತಗಳಿಂದ 109 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ವಿಶ್ವಕಪ್ನಲ್ಲಿ ಅತ್ಯಧಿಕ ಶತಕ ಸಾಧಕರ ಪಟ್ಟಿಯಲ್ಲಿ ಡಿ ಕಾಕ್ ಹರ್ಷಲ್ ಗಿಪ್ಸ್, ಫಾಫ್ ಡು ಪ್ಲೆಸಿಸ್ ಮತ್ತು ಹಾಸಿಂ ಆಮ್ಲ ಅವರ ದಾಖಲೆಯನ್ನು ಸರಿಗಟ್ಟಿದರು. ಎಲ್ಲರು ತಲಾ 2 ಶತಕ ಬಾರಿಸಿದ್ದಾರೆ. 4 ಶತಕ ಬಾರಿಸಿದ ಎಬಿ ಡಿ ವಿಲಿಯರ್ಸ್ ಅಗ್ರಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ IND vs PAK: ಪಾಕಿಸ್ತಾನ ಪಂದ್ಯದಿಂದ ಹೊರಬಿದ್ದ ಇಶಾನ್ ಕಿಶನ್; ಕಾರಣ ಏನು?
ಕಳಪೆ ಪ್ರದರ್ಶನ ತೋರಿದ ಆಸೀಸ್
ಆಸ್ಟ್ರೇಲಿಯಾದ ಬಲಿಷ್ಠ ಆಟಗಾರರು ಈ ಪಂದ್ಯದಲ್ಲಿ ಬ್ಯಾಟಿಂಗ್ ಮರೆತವರಂತೆ ಆಡಿದರು. ಘಾಟಾನುಘಟಿಗಳಾದ ಡೇವಿಡ್ ವಾರ್ನರ್(13) ಮಿಚೆಲ್ ಮಾರ್ಷ್(7), ಸ್ಟೀವನ್ ಸ್ಮಿತ್(19), ಜೋಶ್ ಇಂಗ್ಲೀಷ್(5), ಗ್ಲೆನ್ ಮ್ಯಾಕ್ಸ್ವೆಲ್(3), ಮಾರ್ಕಸ್ ಸ್ಟೋಯಿನಿಸ್(5) ಅಗ್ಗಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಕಗಿಸೊ ರಬಾಡ ಬೌಲಿಂಗ್ ದಾಳಿಗೆ ಬೆಚ್ಚಿ ಬಿದ್ದ ಆಸೀಸ್ ಆಟಗಾರರು ಪ್ರತಿ ರನ್ಗೂ ಪರದಾಡಿದರು. ಅಷ್ಟರ ಮಟ್ಟಿಗೆ ಫಾತಕವಾಗಿತ್ತು ಅವರ ಬೌಲಿಂಗ್. ಇವರಿಗೆ ಮಾರ್ಕೊ ಜಾನ್ಸನ್ ಕೂಡ ಉತ್ತಮ ಸಾಥ್ ನೀಡಿದರು. ಅವರು ಕೂಡ 2 ವಿಕೆಟ್ ಬೇಟೆಯಾಡುವಲ್ಲಿ ಯುಶಸ್ಸು ಕಂಡರು.