Site icon Vistara News

CWG- 2022 | ಭಾರತೀಯ ವನಿತೆಯರಿಗೆ ಆರಂಭದಲ್ಲೇ ಸೋಲಿನ ಕಹಿ

CWG-2022

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್‌ ಗೇಮ್ಸ್‌ನ (CWG- 2022) ಮಹಿಳೆಯರ ಟಿ೨೦ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಮೂರು ವಿಕೆಟ್‌ಗಳಿಂದ ಸೋಲಿಗೆ ಒಳಗಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಸ್ಪರ್ಧೆಯ ಪಟ್ಟಿಗೆ ಸೇರಿದ್ದ ಟಿ೨೦ ಕ್ರಿಕೆಟ್‌ನಲ್ಲಿ ಭಾರತದ ಮೊದಲ ಹೆಜ್ಜೆ ನಿರಾಸೆಯಿಂದ ಕೂಡಿತು.

ಎಜ್‌ಬಾಸ್ಟನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ವನಿತೆಯರ ಬಳಕ ೨೦ ಓವರ್‌ಗಳಲ್ಲಿ ೮ ವಿಕೆಟ್‌ ನಷ್ಟಕ್ಕೆ ೧೫೪ ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಇನ್ನೂ ಆರು ಎಸೆತಗಳು ಬಾಕಿ ಇರುವಂತೆಯೇ ೭ ವಿಕೆಟ್‌ ಕಳೆದುಕೊಂಡು ೧೫೭ ರನ್‌ ಬಾರಿಸಿ ಸೋಲಿಗೆ ಒಳಗಾಯಿತು.

ಮೊದಲು ಬ್ಯಾಟ್‌ ಮಾಡಿದ ಭಾರತರ ಶಫಾಲಿ ವರ್ಮ ೪೮ ರನ್‌ ಬಾರಿಸಿದರೆ, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (೫೨) ರನ್‌ ಬಾರಿಸಿದರು. ಆದರೆ, ಉಳಿದ ಬ್ಯಾಟರ್‌ಗಳಿಂದ ಉತ್ತಮ ನೆರವು ಲಭಿಸಲಿಲ್ಲ. ಹೀಗಾಗಿ ಉತ್ತಮ ಆರಂಭ ಪಡೆದಿರುವ ಹೊರತಾಗಿಯೂ ಬೃಹತ್‌ ಮೊತ್ತ ಪೇರಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಭಾರತ ಬೌಲರ್‌ ರೇಣುಕಾ ಸಿಂಗ್‌ (೧೮ ರನ್‌ಗಳಿಗೆ ೪ ವಿಕೆಟ್‌) ಅಮೋಘ ಬೌಲಿಂಗ್‌ ದಾಳಿಗೆ ನಲುಗಿ ೪೯ ರನ್‌ಗಳಿಗೆ ೫ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಆಶ್ಲೇ ಗಾರ್ಡ್‌ನರ್‌ (೩೫ ಎಸೆತಗಳಲ್ಲಿ ೫೨ ರನ್‌) ಸ್ಫೋಟಕ ಅರ್ಧ ಶತಕ ಹಾಗೂ ಗ್ರೇಸ್‌ ಹ್ಯಾರಿ ೨೦ ಎಸೆತಗಳಲ್ಲಿ ೩೭ ರನ್‌ ಬಾರಿಸಿ ತಂಡವನ್ನು ಗೆಲ್ಲಿಸಿದರು. ಆರಂಭಿಕ ಮುನ್ನಡೆ ದೊರೆತ ಹೊರತಾಗಿಯೂ ಅದನ್ನು ಕಾಪಾಡಿಕೊಳ್ಳಲು ವಿಫಲಗೊಂಡ ಹರ್ಮನ್‌ಪ್ರೀತ್‌ ಪಡೆ ಸೋಲಿನ ನಿರಾಸೆಗೆ ಒಳಗಾಯಿತು.

ಸ್ಕೋರ್‌ ವಿವರ

ಭಾರತ: ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೫೪ (ಶಫಾಲಿ ವರ್ಮ ೪೮, ಹರ್ಮನ್‌ಪ್ರೀತ್‌ ಕೌರ್‌ ೫೨, ಸ್ಮೃತಿ ಮಂಧಾನಾ ೨೪; ಜೆಸ್‌ ಜೊನಾಸೆನ್‌ ೨೨ಕ್ಕೆ೪, ಮೇಗನ್‌ ಶೂಟ್‌ ೨೬ಕ್ಕೆ೨)

ಆಸ್ಟ್ರೇಲಿಯಾ: ೧೯ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೫೭ (ಆಶ್ಲೇ ಗಾರ್ಡ್‌ನರ್‌ ೫೨*, ಗ್ರೇಸ್‌ ಹ್ಯಾರಿಸ್‌ ೩೭, ರೇಣುಕಾ ಸಿಂಗ್‌ ೧೮ಕ್ಕೆ೪).

Exit mobile version