ಬರ್ಮಿಂಗ್‌ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ ೨೮ರಂದು ಆರಂಭವಾಗಲಿರುವ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (CWG- 2022)(CWG- 2022) ೨೧೮ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇವೆಲ್ಲರೂ ಗರಿಷ್ಠ ಪದಕಗಳನ್ನು ಗೆದ್ದು ತರುವರು ಎಂಬುದು ಭಾರತದ ಕ್ರೀಡಾಭಿಮಾನಿಗಳ ಅಭಿಲಾಷೆ. ಆದರೆ, ಶೂಟಿಂಗ್ ಮತ್ತು ಆರ್ಚರಿ ಕ್ರೀಡೆಗಳನ್ನು ಕೈಬಿಟ್ಟಿರುವ ಕಾರಣ ಭಾರತವು ಮತ್ತೆ ತನ್ನ ಸಾಂಪ್ರದಾಯಿಕ ಕ್ರೀಡೆಗಳಾದ ಕುಸ್ತಿ, ವೇಟ್ ಲಿಫ್ಟಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್ , ಟೇಬಲ್ ಟೆನಿಸ್ ಮತ್ತು ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಬೇಕಾಗಿದೆ.
ಭಾರತ ಇದುವರೆಗೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಒಟ್ಟಾರೆ 503 ಪದಕಗಳನ್ನು ಗೆದ್ದಿದ್ದು, ಶೇ.60ರಿಂದ 70ರಷ್ಟು ಕೊಡುಗೆ ಶೂಟಿಂಗ್ ನೀಡಿವೆ. ಅಂತೆಯೇ ನಮ್ಮ ಕುಸ್ತಿಪಟುಗಳು ಪಾರಮ್ಯ ಮೆರೆದಿದ್ದಾರೆ. ಹೀಗಾಗಿ ಹಾಲಿ ಆವೃತ್ತಿಯಲ್ಲಿ ಭಾರತಕ್ಕೆ ಪದಕಗಳ ಸಾಧ್ಯತೆಗಳು ಎಲ್ಲಿವೆ ಎಂಬುದೇ ಸದ್ಯದ ಚರ್ಚೆ.
ಬಜರಂಗ್ ಪೂನಿಯಾ, ರವಿಕುಮಾರ್ ದಹಿಯಾ ಮತ್ತು ವಿನೇಶ್ ಫೋಗಾಟ್ ಬರ್ಮಿಂಗ್‌ಹ್ಯಾಮ್ ಕೂಟದ ಕುಸ್ತಿಯಲ್ಲಿ ಭಾರತದ ಫೇವರಿಟ್ ಸ್ಪರ್ಧಿಗಳು. ಇವರು ಪದಕಗಳನ್ನು ಬಹುತೇಖ ಖಾತರಿ ಪಡಿಸಿದ್ದಾರೆ.
ಹಿಂದಿನ ಆವೃತ್ತಿಯ ಭಾರತ ವೇಟ್ ಲಿಫ್ಟಿಂಗ್ನಲ್ಲಿ 5 ಚಿನ್ನ ಸೇರಿದಂತೆ 9 ಪದಕಗಳನ್ನು ಗೆದ್ದಿತ್ತು. ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ನೇತೃತ್ವದ 15 ಸದಸ್ಯರ ತಂಡ ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದು, ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆ ಒದಗಿಸಿದೆ.
ಸಿಂಧೂ, ಶ್ರೀಕಾಂತ್ ಭರವಸೆ
ಭಾರತದ ಪದಕ ನಿರೀಕ್ಷೆಯಲ್ಲಿ ಬ್ಯಾಡ್ಮಿಂಟನ್ ಕೂಡ ಇದೆ. ಗೋಲ್ಡ್ ಕೋಸ್ಟ್‌ನಲ್ಲಿ 6 ಪದಕ ಬ್ಯಾಡ್ಮಿಂಟನ್‌ನಿಂದ ಬಂದಿತ್ತು. ಈ ಬಾರಿ ಅದನ್ನು ದ್ವಿಗುಣಗೊಳಿಸುವ ಇರಾದೆಯಲ್ಲಿದ್ದಾರೆ. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧೂ, ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್, ವಿಶ್ವ ಚಾಂಪಿಯನ್ ಷಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಮತ್ತು ಸಾತ್ವಿಕ್ ಸಾಯಿ ರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಉತ್ತಮ ಫಾರ್ಮ್ ನಲ್ಲಿದ್ದಾರೆ.
ಮಣಿಕಾ ಭರವಸೆ
201೮ರಲ್ಲಿ ಟೇಬಲ್ ಟೆನಿಸ್ ನಲ್ಲಿ ಮೂರು ಬಂಗಾರ ಸೇರಿದಂತೆ 8 ಪದಕ ಗೆದ್ದು ಆದಿಪತ್ಯ ಸಾಧಿಸಿದ್ದ ಭಾರತ, ಬರ್ಮಿಂಗ್ ಹ್ಯಾಮ್ ನಲ್ಲಿ ಹಿಂದಿನದ್ದನ್ನು ಪುನರಾವರ್ತಿಸುವ ಸಾಧ್ಯತೆಗಳಿವೆ. 2018ರಲ್ಲಿ ಪಾಲ್ಗೊಂಡಿದ್ದ ಮಣಿಕಾ ಬಾತ್ರಾ, ಅಚಂತ ಶರತ್ ಕಮಲ್ ಸೇರಿದಂತೆ ಬಹುತೇಕ ಸ್ಪರ್ಧಿಗಳು ಈ ಬಾರಿಯೂ ಕಣಕ್ಕಿಳಿಯುತ್ತಿರುವುದರಿಂದ ಭಾರತಕ್ಕೆ ಪದಕಗಳ ಖಾತರಿ ಹೆಚ್ಚಾಗಿದೆ.
ಪದಕ ತರುವರು ಲವ್ಲಿನಾ
ಹಿಂದಿನ ಆವೃತ್ತಿಯಲ್ಲಿ ಮೂರು ಚಿನ್ನ ಸೇರಿ 9 ಪದಕ ಗೆದ್ದಿದ್ದ ಬಾಕ್ಸರ್‌ಗಳು ಈ ಬಾರಿಯೂ ಭಾರತದ ಭರವಸೆಗಳೆನಿಸಿಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ರಜತ ಪದಕ ವಿಜೇತೆ ಲವ್ಲಿನಾ ಬೋರ್ಗೊಹೈನ್ ನೇತೃತ್ವದ ಭಾರತ ಬಾಕ್ಸಿಂಗ್ ತಂಡದಲ್ಲಿ ನಿಖತ್ ಜರೀನ್, ಅಮಿತ್ ಪಂಘಾಲ್ , ಶಿವ ಥಾಪ ಅವರಂಥ ಅನುಭವಿ ಬಾಕ್ಸರ್‌ಗಳಿದ್ದಾರೆ.
ಅಥ್ಲೆಟಕ್ಸ್ ಕತೆ ಏನು
ನೀರನ್ ಚೋಪ್ರಾ ಗಾಯಗೊಂಡಿರುವುದು ಭಾರತಕ್ಕೆ ದೊಡ್ಡ ಹಿನ್ನಡೆ. ೨೦೧೮ರಲ್ಲಿ ಚಿನ್ನ ಗೆದ್ದಿದ್ದ ನೀರಜ್ ವಿಶ್ವ ಮಟ್ಟದಲ್ಲಿ ಈಗ ದೂರದ ಎಸೆತಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಗಾಯಗೊಂಡಿರುವ ಅವರ ಅಲಭ್ಯತೆಯಿಂದಾಗಿ ಭಾರತ ಬಹುತೇಕ ಒಂದು ಚಿನ್ನದ ಪದಕ ಕಳೆದುಕೊಂಡಿದೆ.
ಲಾಂಗ್ ಜಂಪರ್ ಎಂ. ಶ್ರೀಶಂಕರ್, ಶಾಟ್‌ಪುಟ್ ಸ್ಪರ್ಧಿ ಮನ್‌ಪ್ರೀತ್‌ಕೌರ್, ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ, ಡಿಸ್ಕಸ್ ಎಸೆತಗಾರ್ತಿ ಸೀಮಾ ಪೂನಿಯಾ, ದೂರದ ಓಟಗಾರ ಅವಿನಾಶ್ ಸಾಬ್ಳೆ ಭಾರತಕ್ಕೆ ಪದಕ ಗೆದ್ದುಕೊಡಬಲ್ಲರು.
ಮಹಿಳೆಯರ ಕ್ರಿಕೆಟ್‌ನಿಂದ ಲಾಭ?
ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್‌ನಲ್ಲಿ ಮಹಿಳೆಯರ ಟಿ20 ಕ್ರಿಕೆಟ್ ಟೂರ್ನಿಯನ್ನು ಹೊಸದಾಗಿ ಸೇರ್ಪಡೆಗೊಳಿಸಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ತಂಡ ಸ್ವರ್ಣ ಪದಕ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದು. ಅದಕ್ಕಾಗಿ ಬಲಿಷ್ಠ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳನ್ನು ಸೋಲಿಸಬೇಕಿದೆ. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಕೂಡ ಪೈಪೋಟಿ ನೀಡಬಲ್ಲ ತಂಡಗಳಾಗಿವೆ. ಭಾರತ ತಂಡ ತನ್ನ 2ನೇ ರೌಂಡ್ ರಾಬಿನ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪೈಪೋಟಿ ನಡೆಸಲಿದೆ.
ಇದನ್ನೂ ಓದಿ | CWG- 2022 | 26ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್‌ಗೆ ಇಂದು ಚಾಲನೆ