ಬರ್ಮಿಂಗಮ್: ಕಾಮನ್ವೆಲ್ತ್ ಗೇಮ್ಸ್‌ನ (CWG- 2022) ಘಾನಾ ವಿರುದ್ಧ ಸವಾರಿ ಮಾಡಿದ್ದ ಭಾರತ ಮಹಿಳೆಯರ ಹಾಕಿ ತಂಡ ಶನಿವಾರ ನಡೆದ ಗುಂಪು ಹಂತದ ಎರಡನೇ ಹಣಾಹಣಿಯಲ್ಲಿ ವೇಲ್ಸ್ ತಂಡದ ವಿರುದ್ಧವೂ ಜಯ ಸಾಧಿಸಿದೆ. ಈ ಮೂಲಕ ಸತತ ಎರಡು ಜಯ ಸಾಧಿಸುವ ಮೂಲಕ ಒಟ್ಟಾರೆ ಆರು ಅಂಕ ಸಂಪಾದಿಸಿ ಎ ಗುಂಪಿನಲ್ಲಿ ಮೊದಲ ಸ್ಥಾನಕ್ಕೆ ಏರಿತು.
ಶನಿವಾರ ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ೩-೧ ಗೋಲ್‌ಗಳ ಅಂತರದಿಂದ ಜಯ ಸಾಧಿಸಿತು. ವಂದನಾ ಕಟಾರಿಯಾ ಎರಡು ಗೋಲ್ (೨೬ ಹಾಗೂ ೪೮ನೇ ನಿಮಿಷ), ಗುರ್ಜಿತ್ ಕೌರ್ (೨೮ನೇ ನಿಮಿಷ) ಅವರ ನೆರವಿನಿಂದ ಭಾರತ ಮೂರು ಗೋಲ್ ದಾಖಲಿಸಿದರೆ, ವೇಲ್ಸ್ ತಂಡದ ಕ್ಸೆನಾನ್ ಹಗ್ಸ್ (೪೫ನೇ ನಿಮಿಷ) ಒಂದು ಗೋಲ್ ಬಾರಿಸಿದರು.
ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಗಿದ್ದ ಭಾರತೀಯ ವನಿತೆಯರು ಮೊದಲೆರಡು ಕ್ವಾರ್ಟರ್‌ಗಳಲ್ಲಿ ಎದುರಾಳಿ ತಂಡಕ್ಕೆ ಗೋಲ್ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೇ ಎರಡು ಗೋಲ್ ಬಾರಿಸಿ ಮುನ್ನಡೆ ಕಾಪಾಡಿಕೊಂಡಿತ್ತು. ಆದರೆ, ಮೂರನೇ ಕ್ವಾರ್ಟರ್ ಮುಕ್ತಾಯದ ವೇಳೆಗೆ ಎದುರಾಳಿ ತಂಡ ಒಂದು ಗೋಲ್ ಬಾರಿಸಿದರೆ, ಅದೇ ನಾಲ್ಕನೇ ಕ್ವಾರ್ಟರ್‌ನಲ್ಲಿ ಮತ್ತೊಂದು ಗೋಲ್ ಬಾರಿಸಿದ ಭಾರತ ವಿಜಯ ಅಂತರವನ್ನು ಹಿಗ್ಗಿಸಿಕೊಂಡಿತು.
ಇದನ್ನೂ ಓದಿ | CWG- 2022 | ಜಿಮ್ನಾಸ್ಟಿಕ್‌ನ ವಾಲ್ಟ್ ವಿಭಾಗದಲ್ಲಿ ಪ್ರಣತಿ ನಾಯಕ್ ಪ್ರಶಸ್ತಿ ಸುತ್ತಿಗೆ