ಬೆಂಗಳೂರು : ವಿಶ್ವದ ನಂಬರ್ ಒನ್ ಆಟಗಾರ ಹಾಗೂ ಮಾಜಿ ಚಾಂಪಿಯನ್ ಮ್ಯಾಗ್ನೆಸ್ ಕಾರ್ಲ್‌ಸೆನ್ ಅವರಿಗೆ ಭಾರತದ ಮತ್ತೊಬ್ಬ ಆಟಗಾರ ಆಘಾತ ಕೊಟ್ಟಿದ್ದಾರೆ. ಏಮ್‌ಚೆಸ್ ರಾಪಿಡ್ ಆನ್‌ಲೈನ್ (Aimchess Rapid Online) ಟೂರ್ನಮೆಂಟ್‌ನ ೯ನೇ ಸುತ್ತಿನ ಆಟದಲ್ಲಿ ಭಾರತದ ೧೬ ವರ್ಷದ ಗ್ರಾಂಡ್ ಮಾಸ್ಟರ್ ಡಿ. ಗುಕೇಶ್ ವಿರುದ್ಧ ಅವರು ಸೋಲು ಕಂಡಿದ್ದಾರೆ. ಈ ಮೂಲಕ ನಾರ್ವೆಯ ಆಟಗಾರ ಸತತ ಎರಡು ದಿನಗಳಲ್ಲಿ ಇಬ್ಬರು ಭಾರತೀಯರ ವಿರುದ್ಧ ಸೋಲು ಕಂಡಂತಾಗಿದೆ. ಭಾನುವಾರ ಅವರು ೧೯ ವರ್ಷದ ಗ್ರಾಂಡ್ ಮಾಸ್ಟರ್ ಅರ್ಜನ್ ಎರಿಗೈಸಿ ವಿರುದ್ಧ ಮಣಿದಿದ್ದರು.
ಸೋಮವಾರ ಮುಂಜಾನೆ ನಡೆದ ಸ್ಪರ್ಧೆಯ ೨೯ನೇ ನಡೆಯ ವೇಳೆ ಗುಕೇಶ್ ಅವರು ಅನುಭವಿ ಆಟಗಾರನನ್ನು ಹಿಮ್ಮೆಟ್ಟಿಸಿದರು. ಬಿಳಿ ಕಾಯಿಯೊಂದಿಗೆ ಆಡಿದ ಭಾರತದ ಆಟಗಾರ ವಿಶ್ವದ ಬಲಿಷ್ಠ ಚೆಸ್ ಪಟುವನ್ನು ಮಣಿಸುವ ಜತೆಗೆ ಟೂರ್ನಿಯಲ್ಲಿ ೨೧ ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದರು. ಪೋಲೆಂಡ್‌ನ ಜಾನ್ ಕ್ರಿಸ್ಟೋಪ್(೨೫) ಮೊದಲ ಸ್ಥಾನದಲ್ಲಿದ್ದರೆ, ಅಜೆರ್‌ಬೈಜಾನ್‌ನ ಶಕ್ರಿಯಾರ್ ಮಮೆಡ್‌ಯೊರಾವ್ (೨೩) ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಡಿ. ಗುಕೇಶ್ ಅವರು ಪ್ರಸ್ತುತ ವಿಶ್ವದ ನಂಬರ್ ಒನ್ ಆಟಗಾರನನ್ನು ಸೋಲಿಸಿದ ಭಾರತದ ಅತ್ಯಂತ ಕಿರಿಯ ಚೆಸ್ ಪಟು ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ. ಅವರಿಗೆ ಈಗ ೧೬ ವರ್ಷ ೪ ತಿಂಗಳು ಹಾಗೂ ೨೦ ದಿನಗಳು. ಈ ದಾಖಲೆ ಈ ಹಿಂದೆ ತಮಿಳುನಾಡಿನ ಇನ್ನೊಬ್ಬ ಚೆಸ್ ಪಟು ಆರ್. ಪ್ರಜ್ಞಾನಂದ ಅವರ ಹೆಸರಿನಲ್ಲಿತ್ತು. ಅವರು ೧೬ ವರ್ಷ ೬ ತಿಂಗಳು ಹಾಗೂ ೧೦ ದಿನಗಳಾಗಿದ್ದಾಗ ಕಾರ್ಲ್‌ಸೆನ್ ಅವರನ್ನು ಮಣಿಸಿದ್ದರು.
ಮ್ಯಾಗ್ನಸ್ ಕಾರ್ಲ್‌ಸೆನ್ ಅವರು ಪ್ರಸ್ತುತ ಟೂರ್ನಿಯಲ್ಲಿ ಐದನೇ ಸ್ಥಾನವನ್ನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | Aimchess Rapid Tournament | ವಿಶ್ವ ನಂಬರ್ ಒನ್ ಆಟಗಾರನಿಗೆ ಸೋಲುಣಿಸಿದ ಭಾರತದ ಚೆಸ್ ಪಟು