ಲಂಡನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಡೇನಿಯಲ್ ವ್ಯಾಟ್(Danielle Wyatt) ಅವರು ತನ್ನ ಬಹುಕಾಲ ಗೆಳತಿ ಜಾರ್ಜಿ ಹಾಡ್ಜ್(Georgie Hodge) ಅವರೊಂದಿಗೆ ಮದುವೆಯಾಗಿದ್ದಾರೆ. ಮದುವೆಯ ಫೋಟೊಗಳನ್ನು ವ್ಯಾಟ್ ತಮ್ಮ ಇನ್ಸ್ಟಾಗ್ರಾಮ್ ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಮಾರ್ಚ್ 2ರಂದು ಜಾರ್ಜಿ ಹಾಡ್ಜ್ ಅವರೊಂದಿಗೆ ವ್ಯಾಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದು ಇಂಗ್ಲೆಂಡ್ ಆಟಗಾರ್ತಿ ಸಲಿಂಗ ವಿವಾಹವಾದ ಎರಡನೇ ನಿದರ್ಶನವಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಮಹಿಳಾ ರಾಷ್ಟ್ರೀಯ ತಂಡದ ಕ್ರಿಕೆಟಿಗರಾದ ನತಾಲಿಯಾ ಸೀವರ್ ಮತ್ತು ಕ್ಯಾಥರಿನ್ ಬ್ರಂಟ್ ಸಲಿಂಗ ವಿವಾಹವಾಗಿದ್ದರು.
ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ 2014ರಲ್ಲಿ ಡೇನಿಯಲ್ ವ್ಯಾಟ್ “ಕೊಹ್ಲಿ ನನ್ನನ್ನು ಮದುವೆಯಾಗು!!’ ಎಂದು ಟ್ವೀಟ್ ಮೂಲಕ ಪ್ರೇಮ ನಿವೇದನೆ ಮಾಡಿದ್ದರು. ಆದರೆ ಕೊಹ್ಲಿ ಇದಕ್ಕೆ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಇದನ್ನೂ ಓದಿ WPL Auction: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಅವಕಾಶ ಸಿಗದೆ, ಹೃದಯ ಒಡೆದು ಹೋಗಿದೆ; ಡೇನಿಯಲ್ ವ್ಯಾಟ್
‘ನಮ್ಮ ಮುಂದಿನ ಜೀವನವನ್ನು ದೃಢಪಡಿಸಿಕೊಳ್ಳುತ್ತಿದ್ದೇವೆ’ ಎಂದು ಮನೆಯ ಎಮೊಜಿಗಳನ್ನು ಹಾಕಿ ಟ್ವಿಟರ್ ಪೋಸ್ಟ್ ಮೂಲಕ ಡೇನಿಯಲ್ ವ್ಯಾಟ್ ತಮ್ಮ ವಿವಾಹದ(Danielle Wyatt Marriage) ವಿಚಾರವನ್ನು ತಿಳಿಸಿದ್ದಾರೆ. ಮದುವೆಯ ಮೂರು ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿರಿಸಿ ಈ ಜೋಡಿಗಳಿಗೆ ಭಾರತ ಮಹಿಳಾ ತಂಡದ ಆಟಗಾರ್ತಿ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮೀಮಾ ರೋಡ್ರಿಗಸ್ ಸೇರಿ ಹಲವು ದೇಶದ ಆಟಗಾರ್ತಿಯರು ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಶುಭ ಕೋರಿದೆ. ನಾಯಕಿ ಹೀದರ್ ನೈಟ್, ಡ್ಯಾನಿ ವ್ಯಾಟ್, ಇಶಾ ಗುಹಾ, ಜೆನ್ನಿ ಗನ್ ಸೇರಿದಂತೆ ಇಂಗ್ಲೆಂಡ್ ತಂಡದ ಪ್ರಸ್ತುತ ಮತ್ತು ಹಿಂದಿನ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
33 ವರ್ಷದ ಡೇನಿಯಲ್ ವ್ಯಾಟ್ ಅವರು ಇಂಗ್ಲೆಂಡ್ ಪರ 2 ಟೆಸ್ಟ್, 110 ಏಕದಿನ ಮತ್ತು 156 ಟಿ20 ಪಂದ್ಯಗಳನ್ನು ಆಡಿ ಒಟ್ಟು 4,762 ರನ್ ಬಾರಿಸಿದ್ದಾರೆ. ಏಕದಿನ ಮತ್ತು ಟಿ20ಯಲ್ಲಿ ತಲಾ 2 ಶತಕ ಬಾರಿಸಿದ್ದಾರೆ. ಬೌಲಿಂಗ್ನಲ್ಲಿಯೂ ಸಾಧನೆ ಮಾಡಿರುವ ಇವರು 73 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಮಹಿಳಾ ಐಪಿಎಲ್ ಟೂರ್ನಿಯಾದ ಡಬ್ಲ್ಯುಪಿಎಲ್ನಲ್ಲಿ ಯುಪಿ ವಾರಿಯರ್ಸ್ ತಂಡದ ಆಟಗಾರ್ತಿಯಾಗಿದ್ದಾರೆ.