ಸಿಡ್ನಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆಸ್ಟ್ರೇಲಿಯಾದಲ್ಲಿ ಬಂಧನಕ್ಕೊಳಗಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರ ದನುಷ್ಕಾ ಗುಣತಿಲಕ (Danushka Gunathilaka) ಅವರನ್ನು ಲಂಕಾ ಕ್ರಿಕೆಟ್ ನಿಂದ ತಕ್ಷಣ ಜಾರಿಯಾಗುವಂತೆ ಅಮಾನತು ಮಾಡಲಾಗಿದೆ. ಸೋಮವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿಯು ಈ ನಿರ್ಧಾರ ಪ್ರಕಟಿಸಿದ್ದು ಗುಣತಿಲಕರನ್ನು ಎಲ್ಲ ಮಾದರಿಯ ಕ್ರಿಕೆಟ್ನಿಂದ ಕೈಬಿಡಲಾಗಿದೆ ಎಂದು ತಿಳಿಸಿದೆ.
ಮಹಿಳೆಯೊಬ್ಬರ ಮೇಲೆ ಲೈಂಗಿ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಲಂಕಾದ ಕ್ರಿಕೆಟ್ ಆಟಗಾರ ದನುಷ್ಕಾ ಗುಣತಿಲಕ ಅವರನ್ನು ರವಿವಾರ ಬೆಳಗ್ಗೆ ಸಿಡ್ನಿ ಪೊಲೀಸರು ಟೀಂ ಹೋಟೆಲ್‌ನಲ್ಲಿ ಬಂಧಿಸಿದ್ದರು. ಸೋಮವಾರ ವಿಚಾರಣೆಗಾಗಿ ಅವರನ್ನು ಸಿಡ್ನಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆದರೆ ಗುಣತಿಲಕ ಅವರಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಇದೀಗ ಗುಣತಿಲಕ ಜಾಮೀನಿಗಾಗಿ ನ್ಯೂ ಸೌತ್ ವೇಲ್ಸ್ನ ಕೋರ್ಟ್ ಮೆಟ್ಟಿಲೇರಲಿದ್ದಾರೆ. ಗುಣತಿಲಕ ಅವರಿಗೆ ಒಂದು ವೇಳೆ ಇಲ್ಲಿಯೂ ಜಾಮೀನು ಸಿಗದಿದ್ದರೆ ಅವರು ದೊಡ್ಡ ಸಂಕಷ್ಟಕ್ಕೆ ಸಿಲುಕಿ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಬಹುದು. ಆಸ್ಟ್ರೇಲಿಯಾದ ಕಾನೂನು ಬಹಳ ಕಠಿಣವಾಗಿದ್ದು ಅತ್ಯಾಚಾರ ಪ್ರಕರಣ ಸಾಬೀತಾದರೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.
ಏನಿದು ಪ್ರಕರಣ?
ಡೇಟಿಂಗ್ ಆ್ಯಪ್‌ವೊಂದರಲ್ಲಿ ಮಹಿಳೆ ಮತ್ತು ಗುಣತಿಲಕ ಮಾತುಕತೆ ನಡೆಸುತ್ತಿದ್ದರು. ಅದರಂತೆ ನ.2ರಂದು ರೋಸ್ ಬೇನಲ್ಲಿರುವ ನಿವಾಸವೊಂದರಲ್ಲಿ ಇಬ್ಬರೂ ಭೇಟಿ ಮಾಡಿದ್ದಾರೆ. ಇದೇ ವೇಳೆ ಗುಣತಿಲಕ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ | ಶ್ರೀಲಂಕಾ ಕ್ರಿಕೆಟ್ ಆಟಗಾರ ದನುಷ್ಕಾ ಮೇಲೆ ಅತ್ಯಾಚಾರ ಆರೋಪ, ಆಸ್ಟ್ರೇಲಿಯದಲ್ಲಿ ಬಂಧನ