Site icon Vistara News

ವಿಶ್ವಕಪ್​ ಪಂದ್ಯಗಳ ಟಿಕೆಟ್​ ಮಾರಾಟಕ್ಕೆ ದಿನಗಣನೆ; ಈ ದಿನ ​ಬುಕಿಂಗ್​ ಆರಂಭ

world cup 2023 trophy

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿ(ICC World Cup 2023) ಆರಂಭಕ್ಕೆ ಇನ್ನು ಕೇವಲ 48 ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಆಸ್ಟ್ರೇಲಿಯಾ ಮತ್ತು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಸಂಭಾವ್ಯ ತಂಡಗಳನ್ನು ಪ್ರಕಟಿಸಿದೆ. ಇದೀಗ ಪಂದ್ಯಗಳ ಟಿಕೆಟ್​ ಬುಕಿಂಗ್ (Tickets For ODI World Cup 2023)​ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಅಭ್ಯಾಸ ಪಂದ್ಯಗಳ ಟಿಕೆಟ್(world cup tickets)​ ಕೂಡ ಸಿಗಲಿದೆ. ಸೆಪ್ಟೆಂಬರ್‌ 15ರಂದು ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳ ಟಿಕೆಟ್​ ಲಭ್ಯವಾಗಲಿದೆ. ಉಳಿದಂತೆ ಎಲ್ಲ ಪಂದ್ಯಗಳ ಟಿಕೆಟ್​ ಯಾವ ದಿನಾಂಕದಂದು ಲಭ್ಯವಾಗಲಿದೆ, ಎಲ್ಲಿ ಟಿಕೆಟ್​ ಬುಕಿಂಗ್​(icc world cup 2023 tickets booking) ಮಾಡಬಹುದು ಎಂಬ ಎಲ್ಲ ಮಾಹಿತಿ ಇಂತಿದೆ.

ಆಗಸ್ಟ್​ 25ಕ್ಕೆ ಮೊದಲ ಹಂತ

ಆಗಸ್ಟ್​ 25ರಿಂದ ಟಿಕೆಟ್​ ಬುಕ್ಕಿಂಗ್​ ಕಾರ್ಯ ಆರಂಭವಾಗಲಿದೆ. ಆದರೆ ಇಲ್ಲಿ ಭಾರತವನ್ನು ಹೊರತುಪಡಿಸಿ ಉಳಿದ ತಂಡಗಳ ನಡುವಿನ ಅಭ್ಯಾಸ ಮತ್ತು ಪ್ರಧಾನ ಪಂದ್ಯಗಳ ಟಿಕೆಟ್​ಗಳನ್ನು ಮಾತ್ರ ಬುಕಿಂಗ್​ ಮಾಡಬಹುದಾಗಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ಅಫಘಾನಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯಗಳ ಟಿಕೆಟ್​ ಲಭ್ಯವಾಗಲಿದೆ.

ಇದನ್ನೂ ಓದಿ ICC World Cup Trophy: ಪ್ರೀತಿಯ ಸಂಕೇತ ತಾಜ್‌ ಮಹಲ್‌ ಎದುರು ಕಂಗೊಳಿಸಿದ ವಿಶ್ವಕಪ್‌ ಟ್ರೋಫಿ

ಭಾರತ ಪಂದ್ಯಗಳ ಟಿಕೆಟ್

ದ್ವಿತೀಯ ಹಂತದಲ್ಲಿ ಭಾರತ ತಂಡದ ಅಭ್ಯಾಸ ಮತ್ತು ಲೀಗ್​ ಪಂದ್ಯಗಳ ಟಿಕೆಟ್​ ಮಾರಾಟವಾಗಲಿದೆ. ಅಭ್ಯಾಸ ಪಂದ್ಯಗಳ ಟಿಕೆಟ್‌ಗಳು ಆಗಸ್ಟ್ 30 ರಂದು ಪ್ರಾರಂಭವಾದರೆ, ಲೀಗ್​ ಹಂತದ ಪಂದ್ಯಗಳು ಆಗಸ್ಟ್ 31 ರಿಂದ ಲಭ್ಯವಿರುತ್ತವೆ. ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿರುವ ಅಕ್ಟೋಬರ್ 14 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ(ickets For world cup india vs pak) ಪಂದ್ಯದ ಟಿಕೆಟ್‌ಗಳನ್ನು ಸೆಪ್ಟೆಂಬರ್ 3 ರಂದು ಬುಕ್​ ಮಾಡಬಹುದು.

ಇಲ್ಲಿ ನೋಂದಣಿ ಮಾಡಿಸಿ

“ವಿಶ್ವಕಪ್ ಟೂರ್ನಿಯ ಅಧಿಕೃತ ಟಿಕೆಟ್‌ಗಳ ಮಾಹಿತಿ ಮತ್ತು ಅಪ್ಡೇಟ್ಸ್‌ ಸ್ವೀಕರಿಸಲು ಅಭಿಮಾನಿಗಳು ಐಸಿಸಿ ವೆಬ್​ಸೈಟ್​ https://www.cricketworldcup.com/register ಲಿಂಕ್​ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಬಿಸಿಸಿಐ ಸಿಇಒ ಹೇಮಾಂಗ್ ಅಮೀನ್ ಹೇಳಿದ್ದಾರೆ. ಆಗಸ್ಟ್ 15ರಿಂದ ನೋಂದಾಯಿಸಲು ಅವಕಾಶ ಸಿಗಲಿದೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೇಮಾಂಗ್ ಅಮೀನ್, ‘ಟಿಕೆಟ್​ ಮಾರಾಟದ ದಿನಾಂಕವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಕೆಲವು ತಿದ್ದುಪಡಿಗಳ ನಂತರ ವೇಳಾಪಟ್ಟಿಯನ್ನು ಈಗ ಅಂತಿಮಗೊಳಿಸಲಾಗಿದೆ. ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳು ಈಗ ಟಿಕೆಟ್‌ ಖರೀದಿಸುವುದಕ್ಕೆ ದಿನಾಂಕ ನಿಗದಿಯಾಗಿದೆ. ಇದರಿಂದ ಅವರ ಕುತೂಹಲ ಇನ್ನಷ್ಟು ಅಧಿಕವಾಗಿರಬಹುದು’ ಹೇಳಿದರು.

ಟಿಕೆಟ್​ ​ಎಲ್ಲಿ ಲಭ್ಯ

ಎಲ್ಲ ಟಿಕೆಟ್​ಗಳನ್ನು ಐಸಿಸಿಯ ಅಧಿಕೃತ ವೆಬ್​ಸೈಟ್​ಗಳಲ್ಲಿ ಬುಕಿಂಗ್​ ಮಾಡಬಹುದು. ಇದರ ಜತೆಗೆ ಬುಕ್​ ಮೈ ಶೋ ಹಾಗೂ ಪೇಟಿಯಂನಲ್ಲಿಯೂ ಟಿಕೆಟ್​ ಲಭ್ಯವಿರಲಿದೆ.

ಭಾರತ ಪಂದ್ಯಗಳ ಟಿಕೆಟ್​ ಮಾರಾಟದ ಮಾಹಿತಿ

ಆಗಸ್ಟ್‌ 30: ತಿರುವನಂತಪುರ ಮತ್ತು ಗುವಾಹಟಿ ನಡೆಯಲಿರುವ ಭಾರತದ ಅಭ್ಯಾಸ ಪಂದ್ಯಗಳ ಟಿಕೆಟ್‌ ಮಾರಾಟ ಈ ದಿನಾಂಕದಂದು ಲಭ್ಯವಾಗಲಿದೆ. ಈ ಎರಡೂ ಮೈದಾನಗಳಲ್ಲಿ ಲೀಗ್​ ಪಂದ್ಯಗಳು ನಡೆಯುವುದಿಲ್ಲ.

ಆಗಸ್ಟ್ 31: ಆಸ್ಟ್ರೇಲಿಯಾ ವಿರುದ್ಧ ಚೆನ್ನೈಯಲ್ಲಿ ನಡೆಯುವ ಪಂದ್ಯ, ದೆಹಲಿಯಲ್ಲಿ ಅಫಘಾನಿಸ್ತಾನ ವಿರುದ್ಧ ಮತ್ತು ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಪಂದ್ಯಗಳ ಟಿಕೆಟ್‌ ಮಾರಾಟವಾಗಲಿದೆ.

ಸೆಪ್ಟೆಂಬರ್‌ 1: ಧರ್ಮಶಾಲಾದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ, ಲಕ್ನೋದಲ್ಲಿ ಇಂಗ್ಲೆಂಡ್‌ ವಿರುದ್ಧ ಮುಂಬಯಿಯಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಪಂದ್ಯಗಳ ಟಿಕೆಟ್‌ ಮಾರಾಟವಾಗಲಿದೆ.

ಸೆಪ್ಟೆಂಬರ್‌ 2: ನೆದರ್ಲೆಂಡ್ಸ್‌ ವಿರುದ್ಧ ಬೆಂಗಳೂರಲ್ಲಿ ನಡೆಯುವ, ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏರ್ಪಡಲಿರುವ ಪಂದ್ಯಗಳ ಟಿಕೆಟ್‌ ಮಾರಾಟ ದೊರೆಯಲಿದೆ.

ಸೆಪ್ಟೆಂಬರ್‌ 3: ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ವಿರುದ್ಧದ​ ಅಹಮದಾಬಾದ್‌ನಲ್ಲಿ ನಡೆಯುವ ಪಂದ್ಯದ ಟಿಕೆಟ್​ ಮಾರಾಟವಾಗಲಿದೆ.

ಟೂರ್ನಿ ಯಾವಾಗ ಆರಂಭ

ಸಂಪೂರ್ಣವಾಗಿ ಭಾರತ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಈ ಮಹತ್ವದ ವಿಶ್ವಕಪ್​ ಟೂರ್ನಿ ಅಕ್ಟೋಬರ್​ 5ರಿಂದ ನವೆಂಬರ್​ 19ರ ವರೆಗೆ ನಡೆಯಲಿದೆ. ಟೂರ್ನಿಯ ಉದ್ಘಾಟನ ಪಂದ್ಯ ಮತ್ತು ಫೈನಲ್​ ಪಂದ್ಯಗಳೆರಡು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ.

Exit mobile version