ಸಿಡ್ನಿ: ಈಗಾಗಲೇ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಆಸ್ಟ್ರೇಲಿಯಾ ತಂಡದ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್(David Warner) ಅವರು ಕೆಲ ದಿನಗಳ ಹಿಂದಷ್ಟೇ ತಂಡ ಬಯಸಿದರೆ ತಮ್ಮ ನಿವೃತ್ತಿಯನ್ನು ಹಿಂಪಡೆಯಲು ಯೋಚಿಸಿದ್ದಾರೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿ(Champions Trophy)ಯಲ್ಲಿ ಆಡಲು ಸಿದ್ಧ ಎಂದು ಹೇಳಿದ್ದರು. ಆದರೆ, ವಾರ್ನರ್ ಅವರ ಈ ಇಂಗಿತವನ್ನು ಪುರಸ್ಕರಿಸುವುದಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ(George Bailey) ತಿಳಿಸಿದ್ದಾರೆ.
ತಂಡಕ್ಕೆ ಸಹಾಯ ಬೇಕಾದಲ್ಲಿ ತಾನು ಆಯ್ಕೆಗೆ ಲಭ್ಯವಿರುವುದಾಗಿ ವಾರ್ನರ್ ಹೇಳಿದ್ದರು. ಇದೇ ವಿಚಾರವಾಗಿ ಮಾತನಾಡಿದ ಆಯ್ಕೆ ಸಮಿತಿಯ ಮುಖ್ಯಸ್ಥ ಜಾರ್ಜ್ ಬೈಲಿ, “ಡೇವಿಡ್ ವಾರ್ನರ್ ಬಯಸಿದರೂ, ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಅವರು ಎಲ್ಲಾ ಮೂರು ಸ್ವರೂಪಗಳಿಂದಲೂ ನಿವೃತ್ತರಾಗಿದ್ದಾರೆ. ಅವರ ಕೊಡುಗೆಯನ್ನು ನಾವು ಶ್ಲಾಘಿಸಲೇಬೇಕು. ಚಾಂಪಿಯನ್ಸ್ ಟ್ರೋಫಿಗೆ ಅವರನ್ನು ಆಯ್ಕೆ ಮಾಡುವ ಯಾವುದೇ ಯೋಜನೆಯಿಲ್ಲ” ಎಂದು ಹೇಳಿದ್ದಾರೆ. ಬೈಲಿಯ ಈ ಹೇಳಿಕೆ ನೋಡುವಾಗ ವಾರ್ನರ್ಗೆ ಚಾಂಪಿಯನ್ಸ್ ಟ್ರೋಫಿ ಆಡುವ ಅವಕಾಶ ಸಿಗುವುದು ಕಷ್ಟ ಎನ್ನುವುದು ಸ್ಪಷ್ಟವಾಗಿದೆ.
ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತದಲ್ಲಿ ಆಸ್ಟ್ರೇಲಿಯಾ ಸೋತು ಹೊರಬಿದ್ದ ತಕ್ಷಣ ವಾರ್ನರ್ ಅವರು ತಮ್ಮ 15 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದರು. 110 ಟಿ20 ಪಂದ್ಯಗಳನ್ನು ಆಡಿರುವ ವಾರ್ನರ್ 3,277 ರನ್ ಗಳಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೂ ವಾರ್ನರ್ ವಿದಾಯ ಹೇಳಿದ್ದರು.
ಇದನ್ನೂ ಓದಿ Champions Trophy 2025: ಚಾಂಪಿಯನ್ಸ್ ಟ್ರೋಫಿಯಿಂದ ಭಾರತ ಹಿಂದೆ ಸರಿದರೆ ಯಾವ ತಂಡಕ್ಕೆ ಸಿಗಲಿದೆ ಅವಕಾಶ?
112 ಟೆಸ್ಟ್‌ಗಳಿಂದ ಅವರು 2011 ಮತ್ತು 2024 ರ ನಡುವೆ 26 ಶತಕಗಳು ಮತ್ತು 37 ಅರ್ಧಶತಕಗಳೊಂದಿಗೆ 44.59 ಸರಾಸರಿಯಲ್ಲಿ 8,786 ರನ್ ಗಳಿಸಿದ್ದಾರೆ. 161 ಏಕದಿನ ಪಂದ್ಯಗಳಿಂದ 45.30 ಸರಾಸರಿಯಲ್ಲಿ 22 ಶತಕ ಮತ್ತು 33 ಅರ್ಧ ಶತಕಗಳ ಸಹಾಯದಿಂದ 6,932 ರನ್ ಗಳಿಸಿದ್ದಾರೆ. 37 ವರ್ಷದ ಡೇವಿಡ್ ವಾರ್ನರ್, 2009ರಲ್ಲಿ ಮೆಲ್ಬೋರ್ನ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ರಿಕಿ ಪಾಂಟಿಂಗ್, ಆ್ಯಡಂ ಗಿಲ್ ಕ್ರಿಸ್ಟ್, ಶೇನ್ ವಾರ್ನ್ ಅವರಂತಹ ದಿಗ್ಗಜ ಆಟಗಾರರೊಂದಿಗೆ ಆಡಿದ ಅನುಭವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಧಿಸುವುದು ಇನ್ನೂ ಯಾವುದೂ ಉಳಿದಿಲ್ಲ. ಮೂರು ಮಾದರಿಯ (ಏಕದಿನ, ಟೆಸ್ಟ್ ಮತ್ತು ಟಿ20) ವಿಶ್ವಕಪ್ ತಂಡದ ಸದಸ್ಯ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನನ್ನ ಕ್ರಿಕೆಟ್ ಜರ್ನಿಯಲ್ಲಿ ಸಹಕರಿಸಿದ ಎಲ್ಲ ಸಿಬ್ಬಂದಿ, ಸಹ ಆಟಗಾರರಿಗೆ ನಾನು ಚಿರಋಣಿ ಎಂದು ವಾರ್ನರ್ ಹೇಳಿ ತಮ್ಮ ನಿವೃತ್ತಿ ಪ್ರಕಟಿಸಿದ್ದರು.