Site icon Vistara News

WTC Final 2023 : ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯವೇ ಸರಿಯಿಲ್ಲ ಎಂದ ಡೇವಿಡ್​ ವಾರ್ನರ್​!

David Warner

#image_title

ಲಂಡನ್​: ಜೂನ್ 7ರಿಂದ 11 ರವರೆಗೆ ಲಂಡನ್​​ನ ಓವಲ್​​ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ (ಡಬ್ಲ್ಯುಟಿಸಿ) ಫೈನಲ್ (WTC Final 2023) ಪಂದ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಯಾವ ತಂಡ ಬಲಿಷ್ಠ, ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಬಹುದು, ಯಾರು ಟ್ರೋಫಿ ಗೆಲ್ಲಬಹುದು ಎಂಬೆಲ್ಲ ಚರ್ಚೆಗಳು ನಡೆಯುತ್ತಿವೆ. ಭಾರತ ತಂಡಕ್ಕೆ ಇದು ಎರಡನೇ ಫೈನಲ್ ಪಂದ್ಯವಾಗಿದ್ದು, ಆಸ್ಟ್ರೇಲಿಯಾ ತಂಡಕ್ಕೆ (Australia Cricket Team) ಚೊಚ್ಚಲ ಟ್ರೋಫಿಯ ಕನಸಾಗಿದೆ. ಭಾರತ (Team India)ಹಿಂದಿನ ಆವೃತ್ತಿಯಲ್ಲಿ ನ್ಯೂಜಿಲಲ್ಯಾಂಡ್​ ವಿರುದ್ದ ಸೋತು ನಿರಾಸೆ ಎದುರಿಸಿತ್ತು. ಹೀಗಾಗಿ ಈ ಬಾರಿ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ಭಾರತೀಯ ಅಭಿಮಾನಿಗಳು.

ಮುಂಬರುವ ಬಹುನಿರೀಕ್ಷಿತ ಪಂದ್ಯದ ಬಗ್ಗೆ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್​ ಡೇವಿಡ್​ ವಾರ್ನರ್ ಮಾತನಾಡಿದ್ದು, ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಒಂದು ಟೆಸ್ಟ್ ಪಂದ್ಯದ ಬದಲು ಮೂರು ಪಂದ್ಯಗಳ ಸರಣಿಯಾಗಿ ನಡೆಸಬೇಕು ಎಂದು ಹೇಳಿದ್ದಾರೆ. ಈ ಮೂಲಕ ಅವರು ಒಂದೇ ಪಂದ್ಯದಲ್ಲಿ ವಿಜೇತರನ್ನು ನಿರ್ಣಯ ಮಾಡುವ ಐಸಿಸಿ ಧೋರಣೆಯನ್ನು ವಿರೋಧಿಸಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಅದ್ಭುತ ಎಂದು ನಾನು ಅಂದುಕೊಳ್ಳುವೆ. ಆದರೆ ನನ್ನ ವಿಮರ್ಶಾತ್ಮಕ ದೃಷ್ಟಿಕೋನದ ಪ್ರಕಾರ ವಿಜೇತರನ್ನು ಒಂದು ಟೆಸ್ಟ್ ಪಂದ್ಯದೊಂದಿಗೆ ಆರಿಸಬಾರದು. ಕನಿಷ್ಠ ಮೂರು ಪಂದ್ಯಗಳ ಸರಣಿಯಾಗಿರಬೇಕು ಎಂದು ನಾನು ಭಾವಿಸುತ್ತೇನೆ. ತಂಡವೊಂದು ಎರಡು ವರ್ಷಗಳ ಕಾಲ ಉತ್ತಮ ಕ್ರಿಕೆಟ್ ಆಡಿರುತ್ತದೆ. ನಂತರ ನಡೆಯುವ ಫೈನಲ್​ನಲ್ಲಿ ಎದುರಾಳಿ ತಂಡದ ವಿರುದ್ಧ ತಟಸ್ಥ ಸ್ಥಳದಲ್ಲಿ ಆಡಬೇಕಾಗುತ್ತದೆ. ನಾವೆಲ್ಲರೂ ಈ ಹಿಂದೆ ಓವಲ್​ನಲ್ಲಿ ಆಡಿದ್ದೇವೆ. ಆದರೆ, ಇದು ಆತಿಥೇಯ ರಾಷ್ಟ್ರದ ವಿರುದ್ಧ ಆಗಿರುವುದಿಲ್ಲ. ಹೀಗಾಗಿ ಹೆಚ್ಚುವರಿ ಎರಡು ಪಂದ್ಯಗಳು ಅಗತ್ಯ ಇದೆ ಎಂದು ವಾರ್ನರ್​ ಕ್ರಿಕ್​ಇನ್ಫೋ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಇದನ್ನೂ ಓದಿ : WTC Final 2023 : ಭಾರತ ತಂಡಕ್ಕೆ ಶುಭ ಸುದ್ದಿ; ಆಸ್ಟ್ರೇಲಿಯಾದ ವೇಗಿ ಫೈನಲ್​ ಪಂದ್ಯದಿಂದ ಔಟ್​​

ಈ ಟ್ರೋಫಿಯ ಗೆಲುವು ವಿಶ್ವದ ಎರಡು ಅತ್ಯುತ್ತಮ ತಂಡಗಳಿಗೆ ದೊಡ್ಡ ಬಹುಮಾನವಾಗಿದೆ. ವಿದೇಶಿ ನೆಲದಲ್ಲಿ ಡ್ಯೂಕ್ಸ್ ಚೆಂಡಿನೊಂದಿಗೆ ಬೌಲಿಂಗ್ ಮಾಡುವ ಎರಡು ವಿಶ್ವ ದರ್ಜೆಯ ಬೌಲಿಂಗ್ ವಿಭಾಗಕ್ಕೂ ಸವಾಲೆನಿಸಿದೆ. ಈ ವಿಚಾರದಲ್ಲಿ ನಾವೆಲ್ಲರೂ ಉತ್ಸುಕರಾಗಿದ್ದೇವೆ. ನಾವು ಕಳೆದ 18-24 ತಿಂಗಳುಗಳಲ್ಲಿ ಕೆಲವು ಅತ್ಯುತ್ತಮ ಕ್ರಿಕೆಟ್ ಆಡಿದ್ದೇವೆ. ಭಾರತ ತಂಡ ಯಾವ ರೀತಿ ಸಜ್ಜಾಗಿದೆ ಎಂಬುದೂ ಗೊತ್ತಿದೆ ಎಂದು ಡೇವಿಡ್​ ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.

ನಿವೃತ್ತಿ ದಿನಾಂಕ ಘೋಷಿಸಿದ ವಾರ್ನರ್​

ಭಾರತ ತಂಡದ ವಿರುದ್ಧದ ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ ಫೈನಲ್ ಪಂದ್ಯ (WTC Final 2023) ಆರಂಭಕ್ಕೆ ಕೇವಲ ನಾಲ್ಕು ದಿನಗಳ ಮೊದಲು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್​ ಡೇವಿಡ್ ವಾರ್ನರ್ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾದ ಬೇಸಿಗೆಯ ಕೊನೆಯಲ್ಲಿ ದೀರ್ಘ ಅವಧಿಯ ಕ್ರಿಕೆಟ್​​ಗೆ ವಿದಾಯ ಹೇಳುವ ಯೋಜನೆ ಇದೆ ಎಂಬುದಾಗಿ ವಾರ್ನರ್ ಶನಿವಾರ ಬಹಿರಂಗಪಡಿಸಿದ್ದಾರೆ.

ಯಾವಾಗಲೂ ನನಗೆ ರನ್​ ಗಳಿಸಬೇಕು ಎಂಬ ಉದ್ದೇಶವಿರುತ್ತದೆ. ಆದರೆ, 2024ರ ವಿಶ್ವ ಕಪ್​ ನನ್ನ ವೃತ್ತಿ ಜೀವನದ ಕೊನೇ ಪಂದ್ಯ ಎಂಬುದಾಗಿ ಅವರು ಹೇಳಿದ್ದಾರೆ.

ನಾನು ನನ್ನ ಕುಟುಂಬಕ್ಕೆ ಋಣಿಯಾಗಿದ್ದೇನೆ. ನಾನು ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ರನ್ ಗಳಿಸಲು ಮತ್ತು ಆಸ್ಟ್ರೇಲಿಯಾದಲ್ಲಿ ಆಡುವುದನ್ನು ಮುಂದುವರಿಸಲು ಸಾಧ್ಯವಾದರೆ ಖಂಡಿತವಾಗಿಯೂ ವೆಸ್ಟ್ ಇಂಡೀಸ್ ಸರಣಿಯಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ.

ಡಬ್ಲ್ಯುಟಿಸಿ ಫೈನಲ್ ಮತ್ತು ಮುಂಬರುವ ಆ್ಯಶಸ್ ಸರಣಿ ಮುಗಿಸಿ ಪಾಕಿಸ್ತಾನ ಸರಣಿಯನ್ನು ಗೆಲ್ಲಲು ಸಾಧ್ಯವಾದರೆ ನಾನು ಖಂಡಿತವಾಗಿಯೂ ಅಲ್ಲಿಗೆ ನನ್ನ ಟೆಸ್ಟ್​ ವೃತ್ತಿಯನ್ನು ಮುಗಿಸುತ್ತೇನೆ ಎಂದು ವಾರ್ನರ್​ ಹೇಳಿದ್ದಾರೆ.

Exit mobile version