ಲಕ್ನೋ: ಶ್ರೀಲಂಕಾ ವಿರುದ್ಧ ಸೋಮವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್ಗಳ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಇದೇ ಪಂದ್ಯದಲ್ಲಿ ಡೇವಿಡ್ ವಾರ್ನರ್(David Warner) ಅವರು ಮೈದಾನ ಸಿಬ್ಬಂದಿಗೆ ನೆರವು ನೀಡಿ ಎಲ್ಲರ ಮನಗೆದ್ದಿದ್ದಾರೆ.
ಶ್ರೀಲಂಕಾ ಬ್ಯಾಟಿಂಗ್ ಇನಿಂಗ್ಸ್ ವೇಳೆ ಮಳೆ ಸುರಿಯಿತು. ಇದೇ ವೇಳೆ ಮೈದಾನ ಸಿಬ್ಬಂದಿ ಪಿಚ್ಗೆ ಕವರ್ ಹಾಕಲು ಮುಂದಾದರು. ಫೀಲ್ಡಿಂಗ್ನಲ್ಲಿದ್ದ ವಾರ್ನರ್ ತಾನು ಕೂಡ ಮಳೆಯನ್ನು ಲೆಕ್ಕಿಸದೇ ಕವರ್ಗಳನ್ನು ಎಳೆಯಲು ಸಹಾಯ ಮಾಡಿದ್ದಾರೆ. ಈ ವಿಡಿಯೊ ಮತ್ತು ಫೋಟೊವನ್ನು ಐಸಿಸಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ವಾರ್ನರ್ ನಡೆಗೆ ಮೆಚ್ಚುಗೆ ಸೂಚಿಸಿದೆ.
ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರು ಪಾದರಸದಂತೆ ಫೀಲ್ಡಿಂಗ್ ನಡೆಸಿ 2 ಅತ್ಯದ್ಭುತ ಕ್ಯಾಚ್ಗಳನ್ನು ಹಿಡಿದು ಮಿಂಚಿದರು. ಆದರೆ ಬ್ಯಾಟಿಂಗ್ನಲ್ಲಿ ವಿಫಲರಾದರು. ಕೇವಲ 11 ರನ್ಗೆ ಔಟಾದರು.
ಪಂದ್ಯ ಗೆದ್ದ ಆಸೀಸ್
ಸತತ ಎರಡು ಸೋಲು ಕಂಡಿದ್ದ 5 ಬಾರಿಯ ವಿಶ್ವ ಚಾಂಪಿಯನ್ ಕೊನೆಗೂ ಲಂಕಾ ವಿರುದ್ಧದ ಗೆದ್ದು ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಇಲ್ಲಿನ ಭಾರತ ರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 43.3 ಓವರ್ಗಳಲ್ಲಿ 209 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 35.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಬಾರಿಸಿ ಗೆಲುವು ಕಂಡಿತು.
ಇದನ್ನೂ ಓದಿ ICC World Cup 2023 : ಗೆಲುವಿನ ಜತೆಗೆ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಸಂತಸದ ಸುದ್ದಿ
ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಕಾಣಲಿಲ್ಲ. ಡೇವಿಡ್ ವಾರ್ನರ್ (11ರನ್) ಹಾಗೂ ಸ್ಟೀವ್ ಸ್ಮಿತ್ (0) ಬೇಗ ಔಟಾಗುವ ಮೂಲಕ 24 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಜತೆಯಾದ ಮರ್ನಸ್ ಲಾಬುಶೇನ್ (40) ಹಾಗೂ ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್ (52) ಚೇತರಿಕೆ ತಂದರು. ಮಾರ್ಷ್ ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದರು. ಬಳಿಕ ಆಡಲು ಇಳಿದ ವಿಕೆಟ್ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ (58) ಕೂಡ ಅರ್ಧ ಶತಕ ಬಾರಿಸಿ ಗೆಲುವಿನ ಹಾದಿಗೆ ತಂಡವನ್ನು ಕೊಂಡೊಯ್ದರು. ಕೊನೆಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ 21 ಎಸೆತಗಳಲ್ಲಿ 31 ರನ್ ಬಾರಿಸಿದರೆ, ಮಾರ್ಕಸ್ ಸ್ಟೊಯ್ನಿಸ್ 10 ಎಸೆತಗಳಲ್ಲಿ 20 ರನ್ ಬಾರಿಸಿ ಜಯ ತಂದುಕೊಟ್ಟರು. ಲಂಕಾ ಪರ ಬೌಲಿಂಗ್ನಲ್ಲಿ ಮದುಶಂಕ 38 ರನ್ಗಳಿಗೆ 3 ವಿಕೆಟ್ ಕಿತ್ತು ಮಿಂಚಿದರು.
ಲಂಕಾ ಪರ ಆರಂಭಿಕ ಆಟಗಾರರಾದ ಪಥುಮ್ ನಿಸ್ಸಾಂಕಾ (67 ಎಸೆತಗಳಲ್ಲಿ 61 ರನ್) ಮತ್ತು ಕುಸಾಲ್ ಪೆರೆರಾ (82 ಎಸೆತಗಳಲ್ಲಿ 78 ರನ್) ಮೊದಲ ವಿಕೆಟ್ಗೆ 130 ಎಸೆತಗಳಲ್ಲಿ 125 ರನ್ ಸೇರಿಸಿದರು. ಉಭಯ ಆಟಗಾರರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ತಂಡಕ್ಕೆ ಆಸರೆಯಾಗುವಲ್ಲಿ ವಿಫಲವಾದದ್ದು ಸೋಲಿಗೆ ಪ್ರಮುಖ ಕಾರಣ.