ಬ್ರಿಸ್ಬೇನ್ : ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ (David Warner) ತಮ್ಮ ವೃತ್ತಿ ಕ್ರಿಕೆಟ್ನಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಟಿ20 ವಿಶ್ವ ಕಪ್, ಏಕ ದಿನ ವಿಶ್ವ ಕಪ್ ಟ್ರೋಫಿಗಳನ್ನು ಗೆದಿದ್ದಾರೆ. ಐಪಿಎಲ್ನಲ್ಲೂ ಟ್ರೋಫಿ ಗೆದ್ದಿದ್ದಾರೆ. ಶತಕಗಳ ಸಾಧನೆ ಮೂಲಕ ಅತ್ಯುತ್ತಮ ಬ್ಯಾಟರ್ ಎಂಬ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಇಷ್ಟೆಲ್ಲ ಅದರೂ ಅವರಿಗೆ ತಂಡದ ಪರ ಆಡುವ ಅಭಿಲಾಷೆ ಕಡಿಮೆಯಾಗಿಲ್ಲ. ಇನ್ನೊಂದಿಷ್ಟು ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡದ ಪರವಾಗಿ ಬ್ಯಾಟ್ ಬೀಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಇವೆಲ್ಲದರ ನಡುವೆ ಅವರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ತಮ್ಮ ನಿವೃತ್ತಿ ಯೋಜನೆಯನ್ನೂ ಪ್ರಕಟಿಸಿದ್ದಾರೆ.
ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ ಅವರಿಗೆ 2024ರ ವಿಶ್ವ ಕಪ್ ಬಳಿಕ ಅಂತಾರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳುವ ಇಚ್ಛೆ ಇದೆ. ಅದನ್ನು ಅವರು ವ್ಯಕ್ತಪಡಿಸಿದ್ದಾರೆ. ಬಿಗ್ ಬ್ಯಾಷ್ ಲೀಗ್ನಲ್ಲಿ ಅವರು ಸಿಡ್ನಿ ಥಂಡರ್ ತಂಡದ ಜತೆ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕುರಿತು ಸ್ಕೈ ಸ್ಪೋರ್ಟ್ಸ್ ಜತೆ ಮಾತನಾಡಿದ ಅವರು, 2024ರ ಟಿ20 ವಿಶ್ವ ಕಪ್ ತನಕ ಆಸ್ಟ್ರೇಲಿಯಾ ತಂಡದ ಪರ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ.
2024 ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ನ ಕೊನೇ ವರ್ಷವಾಗಿದೆ. ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವ ಕಪ್ನಲ್ಲಿ ಚಾಂಪಿಯನ್ ಆಗುವುದೇ ನನ್ನ ಕನಸು. ಆದರೆ, ನಾನು ತಂಡದಲ್ಲಿ ಉಳಿಯುವುದು ಆಯ್ಕೆ ಮಂಡಳಿಯ ನಿರ್ಧಾರದ ಮೇಲೆ ನಿಂತಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನನ್ನ ಆದ್ಯತೆ ಪಟ್ಟಿಯಲ್ಲಿ ಇಲ್ಲ. ಆದರೆ ಏಕ ದಿನ ಮಾದರಿಯ ಕ್ರಿಕೆಟ್ ಹಾಗೂ ಟೆಸ್ಟ್ ಮಾದರಿಯಲ್ಲಿ ಆಡುವ ಗುರಿಯನ್ನು ಹೊಂದಿದ್ದೇನೆ ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ | David Warner | ಮಗಳ ಜತೆಗೆ ಸೂಪರ್ ಸ್ಟೆಪ್ಸ್ ಹಾಕಿದ ಡೇವಿಡ್ ವಾರ್ನರ್; ವಿಡಿಯೊ ವೈರಲ್