Site icon Vistara News

David Warner: ಪ್ರಚಂಡ ಶತಕದ ಮೂಲಕ ಕೊಹ್ಲಿಯ ದಾಖಲೆ ಸರಿಗಟ್ಟಿದ ಡೇವಿಡ್‌ ವಾರ್ನರ್‌

David Warner brought up his century in just 85 balls

ಬೆಂಗಳೂರು: ಪಾಕಿಸ್ತಾನ(Australia vs Pakistan) ವಿರುದ್ಧದ ಪಂದ್ಯದಲ್ಲಿ ಡೇವಿಡ್​ ವಾರ್ನರ್(David Warner)​ ಅವರು ಶತಕ ಬಾರಿಸುವ ಮೂಲಕ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ವಾರ್ನರ್​ ಶತಕ ಸಾಹಸದಿಂದ ಆಸೀಸ್​ ತಂಡ ಪಾಕ್​ ವಿರುದ್ಧ 62ರನ್​ಗಳ ಅಮೋಘ ಗೆಲುವು ಸಾಧಿಸಿತು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿದ ವಾರ್ನರ್​ ಪಾಕ್​ ಬೌಲರ್​ಗಳನ್ನು ಬೆಂಡೆತ್ತಿದರು. ಚಿನ್ನಸ್ವಾಮಿಯ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ನೆರೆದಿದ್ದ ಕ್ರಿಕೆಟ್​ ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಿದರು. ಅವರ ಬ್ಯಾಟಿಂಗ್‌ ಆರ್ಭಟಕ್ಕೆ 85 ಎಸೆತಗಳಲ್ಲೇ ಶತಕ ಪೂರ್ತಿಗೊಂಡಿತು. ಇದೇ ವೇಳೆ ವಾರ್ನರ್‌ ಅವರಿ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದರು. ಒಂದೇ ತಂಡದ ಎದುರು ಸತತ ನಾಲ್ಕು ಶತಕ ಬಾರಿಸಿದ ವಿಶ್ವದ ಎರಡನೇ ಬ್ಯಾಟರ್‌ ಎನಿಸಿಕೊಂಡರು.

ಡೇವೀಡ್‌ ವಾರ್ನರ್‌ ಅವರು ಪಾಕಿಸ್ತಾನ ವಿರುದ್ಧ 2017ರಲ್ಲಿ ಎರಡು, 2019 ಒಂದು ಮತ್ತು 2023ರಲ್ಲಿ ಒಂದು ಶತಕ ಬಾರಿಸಿ ಪಾಕ್‌ ವಿರುದ್ಧ ಆಡಿದ ಸತತ ನಾಲ್ಕು ಪಂದ್ಯಗಳಲ್ಲಿಯೂ ಶತಕ ಬಾರಿಸಿದ್ದಾರೆ. ವಿರಾಟ್‌ ಕೊಹ್ಲಿ ಅವರು 2017-18ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಸತತ ನಾಲ್ಕು ಶತಕ ಬಾರಿಸಿದ್ದರು.

ಪಾಕ್‌ ವಿರುದ್ಧದ ಪಂದ್ಯದಲ್ಲಿ ವಾರ್ನರ್‌ ಕೇವಲ 124 ಎಸೆತಗಳಲ್ಲಿ 14 ಬೌಂಡರಿ ಮತ್ತು 9 ಸಿಕ್ಸರ್‌ ನೆರವಿನಿಂದ 163 ರನ್‌ ಗಳಿಸಿದರು. ಅವರ ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು. ಇದು ವಾರ್ನರ್‌ ಅವರ 21 ನೇ ಏಕದಿನ ಶತಕವಾಗಿದೆ. ವಿಶ್ವಕಪ್‌ನಲ್ಲಿ 5ನೇ ಶತಕವಾಗಿದೆ.

ಜತೆಯಾಟದಲ್ಲಿ ದಾಖಲೆ

ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಪರ ಅತ್ಯಧಿಕ ಆರಂಭಿಕ ಜೊತೆಯಾಟವನ್ನು (259) ದಾಖಲಿಸಿದ ಸಾಧನೆಗೈದರು. 2011ರ ಮಾರ್ಚ್ 16ರಂದು ಇದೇ ಮೈದಾನದಲ್ಲಿ ಕೆನಡಾ ವಿರುದ್ಧ ಬ್ರಾಡ್ ಹ್ಯಾಡಿನ್ ಹಾಗೂ ಶೇನ್ ವ್ಯಾಟ್ಸನ್ 183 ರನ್ ಗಳಿಸಿದ್ದರು. ಆ ದಾಖಲೆಯನ್ನು ಮಾರ್ಷ್​ ಮತ್ತು ವಾರ್ನರ್​ ಮುರಿದಿದ್ದಾರೆ.

ಇದನ್ನೂ ಓದಿ Aus vs Pak : ಪಾಕ್​ ತಂಡವನ್ನು ಹೀನಾಯವಾಗಿ ಸೋಲಿಸಿದ ಆಸ್ಟ್ರೇಲಿಯಾ

ಪಾಕ್‌ಗೆ ಸೋಲು

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ತೇಲಿಯಾ ತಂಡ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 45.3 ಓವರ್​ಗಳಲ್ಲಿ 305 ರನ್​ಗಳಿಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಈ ಗೆಲುವಿನ ಬಳಿಕ ಆಸ್ಟ್ರೇಲಿಯಾ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದರೆ, ಪಾಕಿಸ್ತಾನ ತಂಡ ಐದನೇ ಸ್ಥಾನಕ್ಕೆ ಕುಸಿಯಿತು.

ಆಸ್ಟ್ರೇಲಿಯಾ ತಂಡದ ಪರ ಸ್ಪಿನ್ನರ್ ಆ್ಯಡಂ ಜಂಪಾ ಅವರು 53 ರನ್​ಗೆ 4 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪಾತ್ರ ವಹಿಸಿದರು. ಶಾನ್‌ ಮಾರ್ಷ್‌ ಅವರು 108 ಎಸೆತಗಳಿಂದ 10 ಬೌಂಡರಿ ಮತ್ತು 9 ಸಿಕ್ಸರ್‌ ನೆರವಿನಿಂದ 121 ರನ್‌ ಬಾರಿಸಿದರು.

Exit mobile version