ಲಕ್ನೋ: ಎಷ್ಟೇ ತಂತ್ರಜ್ಞಾನ ಬಂದರೂ ಕ್ರಿಕೆಟ್ನಲ್ಲಿ ಅಂಪೈರ್ಗಳ ಕೆಲ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ಅಲ್ಲದೆ ಇದನ್ನು ಮಾನ್ಯ ಮಾಡುವ ರೀತಿಯೂ ಕೆಲವು ಬಾರಿ ವಿವಾದಕ್ಕೆ ಕಾರಣವಾಗುತ್ತದೆ. ಆಟಗಾರರು ಅಂಪೈರ್ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ ಹಲವು ನಿದರ್ಶನವೂ ಇದೆ. ಲಂಕಾ ವಿರುದ್ಧದ ಪಂದ್ಯದ ವೇಳೆ ಡೇವಿಡ್ ವಾರ್ನರ್ ಅವರಿಗೆ ಔಟ್ ನೀಡಿದ್ದು ಈಗ ಕ್ರಿಕೆಟ್ ವಲಯದಲ್ಲಿ ಚರ್ಚಿತ ವಿಷಯವಾಗಿದೆ.
ಶ್ರೀಲಂಕಾ ನೀಡಿದ 210 ರನ್ಗಳ ಚೇಸಿಂಗ್ ಸಮಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಡೇವಿಡ್ ವಾರ್ನರ್ ಅವರು ವೇಗಿ ದಿಲ್ಶನ್ ಮಧುಶಂಕ ಅವರ ನಾಲ್ಕನೇ ಓವರ್‌ನಲ್ಲಿ ಎಲ್ಬಿಡಬ್ಲ್ಯುವಿಗೆ ಸಿಲುಕಿದರು. ಲಂಕಾ ಆಟಗಾರರ ಔಟ್ ಮನವಿಯನ್ನು ಪುಸ್ಕರಿಸಿದ ಅಂಪೈರ್ ಜೋಯಲ್ ವಿಲ್ಸನ್ ಔಟ್ ಎಂದು ತೀರ್ಪು ನೀಡಿದರು. ಆದರೆ ರಿವ್ಯೂನಲ್ಲಿ ನೋಡುವಾಗ ಇದು ಪಿಚಿಂಗ್ ಇನ್ ಸೈಡ್ ಇದ್ದರೂ ವಿಕೆಟ್ ಮಿಸಿಂಗ್ ಇದ್ದು ತೆಂಡು ಹೊರಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು. ಆದರೆ ಅಂಪೈರ್ಸ್ ಕಾಲ್ ಪ್ರಕಾರ ಇದನ್ನು ಔಟ್ ಎಂದು ಮಾನ್ಯ ಮಾಡಲಾಯಿತು. ಇದು ವಾರ್ನರ್ ಅವರಿಗೆ ಬೇಸರ ಮತ್ತು ಅಚ್ಚರಿ ತಂದಿದೆ.
ಇದನ್ನೂ ಓದಿ AUS vs SL: ಎರಡು ಬಾರಿ ಮಂಕಡಿಂಗ್ ಔಟ್ ನಿರಾಕರಿಸಿ ಕ್ರೀಡಾಸ್ಫೂರ್ತಿ ಮೆರೆದ ಸ್ಟಾರ್ಕ್
ವಿಕೆಟ್ ಮಿಸಿಂಗ್ ಇದ್ದರೂ ಅಂಪೈರ್ ಇದನ್ನು ಔಟ್ ಎಂದು ತೀರ್ಮಾನಿಸಿದ್ದು ಕಂಡು ಡೇವಿಡ್ ವಾರ್ನರ್ ಬೇಸರ ವ್ಯಕ್ತಪಡಿಸಿ ಮೈದಾನದಿಂದ ಹೊರನಡೆದರು. ಅಲ್ಲದೆ ಆಸೀಸ್ ಆಟಗಾರರು ಕೂಡ ಇದು ಹೇಗೆ ಔಟ್ ಎಂದು ಚಿಂತಿಸುತ್ತಿದ್ದರು. ಅಂಪೈರ್ ನಿರ್ಧಾರವೇ ಅಂತಿಮವಾದ ಕಾರಣ ಡೇವಿಡ್ ವಾರ್ನರ್ ಅನಾವಶ್ಯಕವಾಗಿ ವಿಕೆಟ್ ಕಳೆದುಕೊಳ್ಳುವಂತಾಯಿತು. ಈ ತೀರ್ಪು ನೀಡಿದ ಜೋಯಲ್ ವಿಲ್ಸನ್ ವಿರುದ್ಧ ಮತ್ತು ಐಸಿಸಿ ಕ್ರಿಕೆಟ್ ನಿಯಮದ ಬಗ್ಗೆ ಹಲವು ಕ್ರಿಕೆಟ್ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಇದೇ ಪಂದ್ಯದಲ್ಲಿ ಡೇವಿಡ್ ವಾರ್ನರ್(David Warner) ಅವರು ಮೈದಾನ ಸಿಬ್ಬಂದಿಗೆ ನೆರವು ನೀಡಿ ಎಲ್ಲರ ಮನಗೆದ್ದಿದ್ದಾರೆ.
ಶ್ರೀಲಂಕಾ ಬ್ಯಾಟಿಂಗ್ ಇನಿಂಗ್ಸ್ ವೇಳೆ ಮಳೆ ಸುರಿಯಿತು. ಇದೇ ವೇಳೆ ಮೈದಾನ ಸಿಬ್ಬಂದಿ ಪಿಚ್ಗೆ ಕವರ್ ಹಾಕಲು ಮುಂದಾದರು. ಫೀಲ್ಡಿಂಗ್ನಲ್ಲಿದ್ದ ವಾರ್ನರ್ ತಾನು ಕೂಡ ಮಳೆಯನ್ನು ಲೆಕ್ಕಿಸದೇ ಕವರ್ಗಳನ್ನು ಎಳೆಯಲು ಸಹಾಯ ಮಾಡಿದ್ದಾರೆ. ಈ ವಿಡಿಯೊ ಮತ್ತು ಫೋಟೊವನ್ನು ಐಸಿಸಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ವಾರ್ನರ್ ನಡೆಗೆ ಮೆಚ್ಚುಗೆ ಸೂಚಿಸಿದೆ. ಪಾದರಸದಂತೆ ಫೀಲ್ಡಿಂಗ್ ನಡೆಸಿ 2 ಅತ್ಯದ್ಭುತ ಕ್ಯಾಚ್ಗಳನ್ನು ಹಿಡಿದು ಮಿಂಚಿದರು. ಆದರೆ ಬ್ಯಾಟಿಂಗ್ನಲ್ಲಿ ವಿಫಲರಾದರು. ಕೇವಲ 11 ರನ್ಗೆ ಔಟಾದರು.
ಗೆಲುವಿನ ಖಾತೆ ತೆರೆದ ಆಸೀಸ್
ಸತತ ಎರಡು ಸೋಲು ಕಂಡಿದ್ದ 5 ಬಾರಿಯ ವಿಶ್ವ ಚಾಂಪಿಯನ್ ಕೊನೆಗೂ ಲಂಕಾ ವಿರುದ್ಧದ ಗೆದ್ದು ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಇಲ್ಲಿನ ಭಾರತ ರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 43.3 ಓವರ್ಗಳಲ್ಲಿ 209 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 35.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಬಾರಿಸಿ ಗೆಲುವು ಕಂಡಿತು.