Site icon Vistara News

T20 World Cup | ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವೆ ಎಂದ ಆಸೀಸ್‌ ಬ್ಯಾಟರ್‌

Big Bash League

ಮೆಲ್ಬೋರ್ನ್‌ : ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್‌ ಡೇವಿಡ್‌ ವಾರ್ನರ್ ಟಿ೨೦ ವಿಶ್ವ ಕಪ್‌ಗಾಗಿ ಸತತ ಅಭ್ಯಾಸ ನಡೆಸುತ್ತಿದ್ದಾರೆ. ಮತ್ತೊಂದು ಬಾರಿ ತಂಡವನ್ನು ಚಾಂಪಿಯನ್‌ಪಟ್ಟಕ್ಕೆ ಏರಿಸುವುದು ಕೂಡ ಅವರ ಗುರಿಯಾಗಿದೆ. ಏತನ್ಮಧ್ಯೆ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಗುರಿಗಳ ಬಗ್ಗೆಯೂ ಮಾತನಾಡಿದ್ದು, ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ನೀಡುವ ಬಗ್ಗೆಯೂ ಮಾತನಾಡಿದ್ದಾರೆ. ಆದರೆ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇನ್ನೂ ಎರಡು ವರ್ಷ ಮುಂದುವರಿಯುವುದಾಗಿಯೂ ನುಡಿದಿದ್ದಾರೆ.

೩೫ ವರ್ಷದ ಅನುಭವಿ ಆಟಗಾರ ೨೦೦೯ರಲ್ಲಿ ಪದಾರ್ಪಣೆ ಮಾಡಿದ ಬಳಿಕ ಇದುವರೆಗೆ ೯೬ ಟೆಸ್ಟ್‌ ಪಂದ್ಯಗಳು, ೧೩೮ ಏಕ ದಿನ ಪಂದ್ಯಗಳು, ೯೨ ಟಿ೨೦ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಅಂತೆಯೇ ಇನ್ನಷ್ಟು ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡದಲ್ಲಿ ಮುಂದುವರಿಯುವುದಾಗಿಯೂ ಹೇಳಿದ್ದಾರೆ. ಆದರೆ, ಟೆಸ್ಟ್‌ ಮಾದರಿಗೆ ವಿದಾಯ ಹೇಳುವ ಸೂಚನೆ ಕೊಟ್ಟಿದ್ದಾರೆ.

ಸಿಡ್ನಿ ಮಾರ್ನಿಂಗ್ ಜತೆ ಮಾತನಾಡಿದ ಅವರು “ಟಿ೨೦ ಮಾದರಿಯಲ್ಲಿ ಇನ್ನಷ್ಟು ವರ್ಷಗಳ ಕಾಲ ಆಡುವುದು ನನ್ನ ಗುರಿಯಾಗಿದೆ. ೨೦೨೪ರ ತನಕ ಆಡುವ ಗುರಿಯನ್ನು ಹೊಂದಿದ್ದೇನೆ. ಅದೇ ರೀತಿ ಮುಂದಿನ ವರ್ಷ ನಡೆಯುವ ಏಕ ದಿನ ವಿಶ್ವ ಕಪ್‌ನಲ್ಲಿ ಆಡುವ ಮೂಲಕ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದೇನೆ,” ಎಂದು ಹೇಳಿದ್ದಾರೆ.

ಮುಂದುವರಿದ ಅವರು “ನನ್ನ ಪಾಲಿಗೆ ಎಷ್ಟು ಟೆಸ್ಟ್‌ ಪಂದ್ಯಗಳು ಉಳಿದುಕೊಂಡಿವೆ ಎಂಬುದು ಗೊತ್ತಿಲ್ಲ. ಈ ಬೇಸಿಗೆ ಋತು ಮುಗಿದ ಬಳಿಕ ನಾನು ದೀರ್ಘ ಅವಧಿಯ ಕ್ರಿಕೆಟ್‌ನಲ್ಲಿ ಮುಂದುವರಿಯುವ ಬಗ್ಗೆ ಚಿಂತನೆ ಮಾಡಲಿದ್ದೇನೆ,”ಎಂಬುದಾಗಿ ಅವರು ಹೇಳಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ನಾನು ಕೌಶಲಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡುತ್ತಿಲ್ಲ. ಫಿಟ್ನೆಸ್ ಕಾಯ್ದುಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆಟ ಮುಂದುವರಿಸಬೇಕಾದರೆ ಹೆಚ್ಚು ಫಿಟ್‌ ಅಗಿರಬೇಕಾಗುತ್ತದೆ,” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | Big Bash League | ಮಗಳು ಆಟ ನೋಡಬೇಕೆಂತೆ, ಅದಕ್ಕೆ ಇಲ್ಲೇ ಆಡುವೆ ಎಂದ ಡೇವಿಡ್‌ ವಾರ್ನರ್‌

Exit mobile version