ಜೊಹಾನ್ಸ್ಬರ್ಗ್: ಆಸ್ಟ್ರೇಲಿಯಾದ ಎಡಗೈ ಆರಂಭಿಕ ಆಟಗಾರ ಡೇವಿಡ್ ವಾರ್ನರ್(David Warner), ದಕ್ಷಿಣ ಆಫ್ರಿಕಾ(Australia vs South Africa) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸುವ ಜತೆಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮರಿದಿದ್ದಾರೆ. ವಾರ್ನರ್ ಆರಂಭಿಕನಾಗಿ 46ನೇ ಅಂತಾರಾಷ್ಟ್ರೀಯ ಶತಕ(ಮೂರು ಮಾದರಿಯ) ಬಾರಿಸಿ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯನ್ನು ಮುರಿದರು.
ಶನಿವಾರ ನಡೆದ ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ 93 ಎಸೆತ ಎದುರಿಸಿ 12 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 106 ರನ್ ಬಾರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ 20ನೇ ಶತಕ ಪೂರೈಸಿದರು. ಕಳೆದೊಂದು ವರ್ಷಗಳಿಂದ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದ ಡೇವಿಡ್ ವಾರ್ನರ್ ವಿಶ್ವಕಪ್ಗೂ ಮುನ್ನ ಪ್ರಚಂಡ ಫಾರ್ಮ್ಗೆ ಮರಳಿದ್ದು ಆಸ್ಟ್ರೇಲಿಯಾ ತಂಡಕ್ಕೆ ಆನೆ ಬಲ ಬಂದಂತಾಗಿದೆ.
ಸಚಿನ್ ದಾಖಲೆ ಪತನ
ಸಚಿನ್ ತೆಂಡೂಲ್ಕರ್ ಅವರು ಆರಂಭಿಕನಾಗಿ 45 ಶತಕ ಹೊಡೆದು ಇದುವರೆಗೆ ಅಗ್ರ ಸ್ಥಾನದಲ್ಲಿದ್ದರು. ಈ ಎಲ್ಲ ಶತಕಗಳು ಏಕದಿನದಲ್ಲೇ ದಾಖಲಾಗಿತ್ತು. ವಾರ್ನರ್ ಅವರು ಟೆಸ್ಟ್‌ನಲ್ಲಿ 25, ಏಕದಿನದಲ್ಲಿ 20 ಹಾಗೂ ಟಿ20ಯಲ್ಲಿ ಒಂದು ಶತಕ ಹೊಡೆದಿದ್ದಾರೆ. ಸಚಿನ್ ಈ ಮೈಲುಗಲ್ಲನ್ನು ತಲುಪಲು 346 ಇನಿಂಗ್ಸ್ ಆಡಿದ್ದರು. ಆದರೆ ವಾರ್ನರ್ 342 ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ.
ವಾರ್ನರ್ ಜತೆಗೆ ಮಾರ್ನಸ್ ಲಬುಶೇನ್ 124 ರನ್ ಹೊಡೆದರು. ಆದರೆ ಲಬುಶೇನ್ ಅವರನ್ನು ಏಕದಿನ ವಿಶ್ವಕಪ್ಗೆ ಪರಿಗಣನೆ ಮಾಡಿಲ್ಲ. ಇದೀಗ ಅವರ ಪ್ರಚಂಡ ಬ್ಯಾಟಿಂಗ್ ಕಂಡ ಆಸೀಸ್ ಕ್ರಿಕೆಟ್ ಮಂಡಳಿಗೆ ಅವರನ್ನು ಕೈಬಿಟ್ಟಿರುವುದು ಚಿಂತೆಗೀಡು ಮಾಡಿದೆ. ಸದ್ಯ ಪ್ರಕಟಗೊಂಡಿರುವ 15 ಆಟಗಾರರ ಪೈಕಿ ಯಾರಾದರು ಗಾಯಗೊಂಡರೆ ಆಗ ಲಬುಶೇನ್ ಆಯ್ಕೆಯಾಗಬಹುದು.
ಇದನ್ನೂ ಓದಿ IPL 2023: ಗೆದ್ದ ಸಂತಸದಲ್ಲಿದ್ದ ಡೇವಿಡ್ ವಾರ್ನರ್ಗೆ 12 ಲಕ್ಷ ದಂಡ
ಪಂದ್ಯ ಗೆದ್ದ ಆಸ್ಟ್ರೇಲಿಯಾ
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ 8 ವಿಕೆಟಿಗೆ 392 ರನ್ ಪೇರಿಸಿತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 41.5 ಓವರ್ ಗಳಲ್ಲಿ 269 ರನ್ ಗಳಿಗೆ ಆಲೌಟಾಯಿತು. ಆಸ್ಟ್ರೇಲಿಯ 123 ರನ್‌ಗಳ ಭರ್ಜರಿ ಜಯ ಸಾಧಿಸುವ ಜತೆಗೆ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಸೆಪ್ಟೆಂಬರ್ 12ರಂದು ನಡೆಯಲಿದೆ. ಇದು ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸೋತರೆ ತವರಿನಲ್ಲಿ ಸರಣಿ ಸೋಲಿನ ಮುಖಭಂಗ ಅನುಭವಿಸಲಿದೆ. ಗೆದ್ದರಷ್ಟೇ ಸರಣಿ ಜೀವಂತ ಇರಲಿದೆ.